ದುಡ್ಡು ಕೊಟ್ಟು ಎದುರು ಅಭ್ಯರ್ಥಿಯನ್ನಾಗಿಸಿದ ಸವದಿ-ಆರೋಪ
ನಿರ್ಲಕ್ಷ್ಯ ಹಾಗು ಕಡೆಗಣಿಸುತ್ತಿರುವ ಹಾಲಿ ಶಾಸಕ, ಬಿಜೆಪಿ ಅಭ್ಯರ್ಥಿ ಸಿದ್ದು ಸವದಿಯವರ ವಿರುದ್ಧ ಸಿಡಿದೆದ್ದು ಇಂದು ನೂರಕ್ಕೂ ಅಧಿಕ ಕಾರ್ಯಕರ್ತರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಘೋಷಿಸಿದರು.
ಬನಹಟ್ಟಿಯ ತೋಟದ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಬಿಟ್ಟು 2004 ರಲ್ಲಿ ಬಿಜೆಪಿಯಿಂದ ಅವಿರತ ಸೇವೆ ಮಾಡಿದ್ದು, ನನ್ನ 5 ದಶಕಗಳ ರಾಜಕೀಯ ಭವಿಷ್ಯದಲ್ಲಿ ಎರಡು ಬಾರಿ ನೋವಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ, ಬಿಜೆಪಿ ಮುಖಂಡ ಭೀಮಶಿ ಮಗದುಮ್ ಹೇಳಿದರು.
ಮತ್ತೊಮ್ಮೆ ಅಭ್ಯರ್ಥಿಯಾಗಿ ಮಣೆ ಹಾಕಿರುವ ಪಕ್ಷವು ಭ್ರಷ್ಟರನ್ನೇ ಬೆಂಬಲಿಸುವಲ್ಲಿ ಕಾರಣವಾಗಿದ್ದು, ಕಾರ್ಯಕರ್ತರ ಮೇಲೆ ದರ್ಪವೆಸಗಿರುವ ಹಾಗು ಹಿರಿಯ ಮುಖಂಡರ ನಿರ್ಲಕ್ಷ್ಯ ವಹಿಸಿರುವವರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದು, ಈ ಬಾರಿ ತಕ್ಕ ಪಾಠ ಕಲಿಸಲಾಗುವದೆಂದು ಮಗದುಮ್ ತಿಳಿಸಿದರು.
ಎದುರ ಅಭ್ಯರ್ಥಿಗೆ ಲಾಭಿ
ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನಾಗಿಸಲು ಹಲವಾರು ಕೋಟಿ ರೂ.ಗಳಿಗೆ ಡೀಲ್ ಆಗಿದ್ದು, ಅದರಷ್ಟೇ ಪ್ರಬಲವಾಗಿ ವಿರೋಧಿ ಪಕ್ಷವಾಗಿರುವ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸ್ವತಃ ಸವದಿಯವರೇ ದುಡ್ಡು ಕೊಟ್ಟು ಅಭ್ಯರ್ಥಿಯನ್ನಾಗಿಸಿದ್ದಾರೆಂದು ಮಗದುಮ್ ಗಂಭೀರ ಆರೋಪ ಮಾಡಿದರು.
ಈಗಾಗಲೇ ರಾಜೀನಾಮೆ ಪತ್ರವನ್ನು ಜಿಲ್ಲಾಧ್ಯಕ್ಷರಿಗೆ ಇ-ಮೇಲ್ ಮುಖಾಂತರ ರವಾನಿಸಲಾಗಿದೆ. ಬಿಜೆಪಿಯಿಂದ 10 ಜನ ಸಾಮೂಹಿಕವಾಗಿ ಆಕಾಂಕ್ಷಿಗಳಾಗಿದ್ದೇವು. ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವ ಬಗ್ಗೆ ಚರ್ಚೆ ನಡೆದಿದ್ದು, ಕಾಂಗ್ರೆಸ್‌ನ ಕೆಲ ಅತೃಪ್ತರೂ ಸಂಪರ್ಕದಲ್ಲಿದ್ದು, ಇನ್ನೆರಡು ದಿನಗಳಲ್ಲಿ ಸ್ಪಷ್ಟ ನಿರ್ಧಾರವಾಗಲಿದೆ ಎಂದರು.
ಮಲ್ಲಪ್ಪ ವಾಲಿ, ಸಂಗಪ್ಪ ಮಾಲಗಾಂವಿ, ಅಡವೇಶ ಗುರವ, ಎಸ್.ಆರ್. ಪಾಟೀಲ, ಶಂಕರ ಧರಿಗೌಡರ, ಶಂಕರಗೌಡ ಪಾಟೀಲ, ಹರ್ಷವರ್ಧನ ಪಟವರ್ಧನ, ಬಸವರಾಜ ದಲಾಲ, ದಾನಪ್ಪ ಆಸಂಗಿ, ದುಂಡಪ್ಪ ಪಾಟೀಲ ಸೇರಿದಂತೆ ಅನೇಕರಿದ್ದರು.

Social Plugin