ಅತೃಪ್ತ ಬಿಜೆಪಿ+ಕಾಂಗ್ರೆಸ್=ಬಂಡಾಯ
ಕಳೆದ 4 ವರ್ಷಗಳಲ್ಲಿ ತೇರದಾಳದಲ್ಲಿ ಸಂಪೂರ್ಣ ಕಡೆಗಣನೆಯಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಮರುಜೀವ ತುಂಬಿ ಸದೃಢಗೊಳಿಸಿದ ಡಾ. ಪದ್ಮಜಿತ ನಾಡಗೌಡರಿಗೆ ಈ ಬಾರಿ ಟಿಕೆಟ್ ನೀಡಿದಿದ್ದಲ್ಲಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರದ ಮೊದಲ ದಿನವೇ ಸ್ಪರ್ಧೆಗಿಳಿಯುವದು ನಿಶ್ಚಿತವೆಂದು ಕಾಂಗ್ರೆಸ್ ಮುಖಂಡ ಶಂಕರ ಸೊರಗಾಂವಿ ಬಹಿರಂಗಪಡಿಸಿದರು.
ಶುಕ್ರವಾರ ಬನಹಟ್ಟಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಹಾಲಿ ಶಾಸಕ ಸಿದ್ದು ಸವದಿಯವರು ಭ್ರಷ್ಟಾಚಾರದ ಬೇಗುದಿಯಲ್ಲಿ ಬೆಂದಿದ್ದು,ಜನತೆ ಕಾಂಗ್ರೆಸ್ ಅದರಲ್ಲೂ ನಾಡಗೌಡರತ್ತ ವಾಲಿದ್ದಾರೆ.
ಕೋವಿಡ್ ಹಾಗು ಮಹಾಪೂರ ಸಂದರ್ಭ ಮತ್ತು ಧಾರ್ಮಿಕ, ಕ್ರೀಡೆ, ಸಾಂಸ್ಕçತಿಕ ಸೇರಿದಂತೆ ಚಟುವಟಿಕೆಗಳಿಗೆ ಸಹಕಾರಿಯಾಗಿ ಪಕ್ಷದ ಕಾರ್ಯಕರ್ತರನ್ನು ಗಟ್ಟಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಕ್ಷದ ಆಂತರಿಕ 2-3 ಸಮೀಕ್ಷೆಯಲ್ಲಿ ನಾಡಗೌಡರ ಪರವಿದೆ. ಯಾರದೋ ಓಲೈಕೆಗೆ ಕ್ಷೇತ್ರ ಕಳೆದುಕೊಳ್ಳುವದು ಬೇಡ. ಬದಲಾಗಿ ಸ್ಥಳೀಯ ವ್ಯಕ್ತಿಗೆ ಟಿಕೆಟ್ ನೀಡಿದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತವೆಂದು ಸೊರಗಾಂವಿ ತಿಳಿಸಿದರು.
ಕಾಂಗ್ರೆಸ್ ಮುಖಂಡ ನೀಲೇಶ ದೇಸಾಯಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಜೈನ ಸಮುದಾಯದಿಂದ ಯಾವದೇ ವ್ಯಕ್ತಿಗೆ ಟಿಕೆಟ್ ನೀಡಿಲ್ಲ. ನಾಡಗೌಡರಿಗೆ ನೀಡುವದರೊಂದಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಹೈಕಮಾಂಡ್ ಮುಂದಾಗಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಮಾಳು ಹಿಪ್ಪರಗಿ ಮಾತನಾಡಿ, ಹೀನಾಯ ಸ್ಥಿತಿಯಲ್ಲಿದ್ದ ಪಕ್ಷವನ್ನು ಬಲಪಡಿಸಿ ಕಾರ್ಯಕರ್ತರಿಗೆ ಪ್ರೋತ್ಸಾಹ ನೀಡುವಲ್ಲಿ ನಾಡಗೌಡರ ಯಶಸ್ವಿಯಾಗಿದ್ದಾರೆ.
ಟಿಕೆಟ್‌ಗಾಗಿ ವರಿಷ್ಠರಿಗೆ ಮನವಿ ಬದಲಾಗಿ ಒತ್ತಾಯ ಮಾಡಲಾಗುವದೆಂದರು.
ಬಿಜೆಪಿ+ಕಾಂಗ್ರೆಸ್ = ಬಂಡಾಯ?:
ಈ ಬಾರಿ ಬಿಜೆಪಿ ಹಾಗು ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿ ಅಭ್ಯರ್ಥಿ ಆಯ್ಕೆ ಅತ್ಯಂತ ಜಟಿಲ ಪರಿಸ್ಥಿತಿಯಲ್ಲಿದ್ದು, ಜಿಲ್ಲೆಯಾದ್ಯಂತ ಕಾಂಗ್ರೆಸ್‌ನಿಂದ ಎಲ್ಲ ಕ್ಷೇತ್ರಗಳಲ್ಲಿಯೂ ಟಿಕೆಟ್ ಹಂಚಿಕೆಯಾಗಿದ್ದರೂ ತೇರದಾಳದಲ್ಲಿ ಇನ್ನೂ ನಿಗೂಢವಾಗಿದೆ.
ಮಾಜಿ ಸಚಿವೆ ಉಮಾಶ್ರೀಗೆ ಸ್ಥಳೀಯ ಮುಖಂಡರ ಲಕ್ಷ್ಮಣ ರೇಖೆ ಸವಾಲಾಗಿದ್ದು, ಒಂದು ವೇಳೆ ಸ್ಥಳೀಯರಿಗೆ ಟಿಕೆಟ್ ದೊರಕದಿದ್ದಲ್ಲಿ ಬಿಜೆಪಿಯಲ್ಲಿ ಅತೃಪ್ತರೊಂದಿಗೆ ಕಾಂಗ್ರೆಸ್‌ನ ಅತೃಪ್ತರೂ ಸೇರಿ ಬಂಡಾಯಕ್ಕೆ ಕಾರಣವಾಗಲಿದ್ದಾರೆಂದು ಕಾರ್ಯಕರ್ತರು ಬಹಿರಂಗ ಹೇಳಿಕೆ ನೀಡುತ್ತಿರುವದು ವಿಶೇಷ.

Social Plugin