ಅಚ್ಚರಿ ಅಭ್ಯರ್ಥಿಗೆ ಕಾರಣವಾದ ತೇರದಾಳ
 ಸ್ಥಳೀಯ ಅಭ್ಯರ್ಥಿಗೆ ಮಣೆ ಹಾಕಬೇಕೆಂಬ ಕೂಗಿಗೆ ಸ್ಪಂದಿಸಿದ ಕಾಂಗ್ರೆಸ್ ಹೈಕಮಾಂಡ್‌ಗೆ ಸರದಿಯಲ್ಲಿ ಸಾಲು ಸಾಲು ಹೆಸರುಗಳು ಮುಂಚೂಣಿಯಲ್ಲಿ ಕೇಳಿ ಬರುತ್ತಿದ್ದವು. ಘಟಾನುಘಟಿಗಳ ಭಾರಿ ಪೈಪೋಟಿಯಲ್ಲಿ ನೇಕಾರ ಸಮುದಾಯದಿಂದ ಡಾ. ಎಂ.ಎಸ್. ದಡ್ಡೇನವರ, ಪಕ್ಷದ ಹಿರಿಯರಾದ ಡಾ. ಎ.ಆರ್. ಬೆಳಗಲಿ ಹಾಗು ಯುವ ಮುಖಂಡ ಡಾ. ಪದ್ಮಜಿತ ನಾಡಗೌಡ ಪಾಟೀಲ ಹೆಸರಿದ್ದವು.

 ಇವರೆಲ್ಲರನ್ನೂ ಮೀರಿ ಮಹಾಲಿಂಗಪೂರದ ಸಿದ್ದು ಕೊಣ್ಣೂರ ಟಿಕೆಟ್‌ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವದು ಕ್ಷೇತ್ರದ ಜನತೆಗೂ ಅಚ್ಚರಿ ಮೂಡಿಸುವದರ ಜೊತೆಗೆ ವಿಶೇಷತೆಯಿಂದ ಕೂಡಿದಂತಾಗಿದೆ.

*ಉಭಯ ಪಕ್ಷಗಳ ಅಭ್ಯರ್ಥಿಗಳು ಪಂಚಮಸಾಲಿ*

 ಹಾಲಿ ಶಾಸಕ ಸಿದ್ದು ಸವದಿ ಬಿಜೆಪಿ ಅಭ್ಯರ್ಥಿಯಾಗಿ ಹಾಗು ಕಾಂಗ್ರೆಸ್ ಅಭ್ಯರ್ಥಿ ಸಿದ್ದು ಕೊಣ್ಣೂರ ಇಬ್ಬರೂ ಪಂಚಮಸಾಲಿ ಸಮುದಾಯದವರೇಯಾಗಿರುವದು ಅತ್ಯಂತ ಕುತೂಹಲಕರ ಅಂಶವಾಗಿದೆ.

ಈಗಾಗಲೇ ಮೂರು ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿರುವ ಸಿದ್ದು ಸವದಿಗೆಹೊಸ ಮುಖವಾಗಿ ಸವಾಲು ಹಾಕಲಿರುವ ಸಿದ್ದು ಕೊಣ್ಣೂರಗೆ ಈ ಬಾರಿ ಮೊದಲ ಪರೀಕ್ಷೆಯಾಗಿದೆ.

*ಬಿಜೆಪಿ ಬಂಡಾಯ ವರವಾಗುವದೇ*

ಈಗಾಗಲೇ ಬಿಜೆಪಿಯಲ್ಲಿ ಸ್ಥಳೀಯರಿಗೆ ಟಿಕೆಟ್‌ನೀಡಬೇಕೆನ್ನುವ ವಿಷಯದಲ್ಲಿ ವಿಫಲಗೊಂಡಿರುವ ಬಿಜೆಪಿ ಬಂಡಾಯ ಮುಖಂಡರು ನಿಗೂಢ ಸಭೆಗಳನ್ನು ನಡೆಸುತ್ತಿದ್ದು, ಬಂಡಾಯ ಅಭ್ಯರ್ಥಿಯ ಹುಡುಕಾಟದಲ್ಲಿದ್ದರೆ, ಮತ್ತೊಂದೆಡೆ ಸ್ಥಳೀಯ ಅಭ್ಯರ್ಥಿಯಾಗಿ ಕಾಂಗ್ರೆಸ್‌ನಿಂದ ಸ್ಪರ್ಧೆಗಿಳಿದಿರೆ ಅವರನ್ನು ಬೆಂಬಲಿಸುವ ವಿಚಾರದಲ್ಲಿದ್ದಾರೆ.

 ಇವೆಲ್ಲದಕ್ಕೂ ತಿಲಾಂಜಲಿ ಹಾಡಿರುವ ಕಾಂಗ್ರೆಸ್. ಈ ಬಾರಿ ಸ್ಥಳೀಯ ಅಭ್ಯರ್ಥಿಗೆ ಮಣೆ ಹಾಕಿರುವದರಿಂದ ಬಿಜೆಪಿ ಬಂಡಾಯ ವ್ಯಕ್ತಿಗಳ ನಡೆ ಎಲ್ಲಿ ಎಂಬುದು ಶೀಘ್ರವೇ ಹೊರಬೀಳಲಿದೆ.