ಆಕಾಂಕ್ಷಿಗಳ `ಪ್ರಬಲ’ಕ್ಕೆ ಮಣಿದ ಉಭಯ ಪಕ್ಷಗಳ ವರಿಷ್ಠರು
ಬಾಗಲಕೋಟೆ ಜಿಲ್ಲೆಯಲ್ಲಿಯೇ ಅತ್ಯಂತ ಅನನುಭವಿ ಕ್ಷೇತ್ರವಾಗಿರುವ ತೇರದಾಳ ವಿಧಾನಸಭಾ ಕ್ಷೇತ್ರವು ೨೦೦೮ ರಲ್ಲಿ ಗುಳೇದಗುಡ್ಡ ಕ್ಷೇತ್ರದ ಬದಲಾಗಿ ಸೃಷ್ಟಿಯಾಗಿರುವ ಹೊಸ ಕ್ಷೇತ್ರವಾಗಿದ್ದು ಅಂದಿನಿಂದಲೂ ರಾಜಕೀಯ ಹುರಿಯಾಳುಗಳಾಗಿ ಸ್ಥಳೀಯರು ಪ್ರಬಲರಾಗದಿರುವದೇ ಈ ಭಾಗದ ಅತ್ಯಂತ ಕಪ್ಪು ಕಲೆ ಎಂದರೂ ತಪ್ಪಾಗಲಾರದು.
೨೦೦೮ ರಲ್ಲಿ ಕಾಂಗ್ರೆಸ್ ಹಾಗು ಬಿಜೆಪಿ ಮಧ್ಯ ಕೊನೆಯ ಹಂತದಲ್ಲಿ ಹಾಲಿ ಶಾಸಕ ಸಿದ್ದು ಸವದಿ ಹಾಗು ಮಾಜಿ ಸಚಿವೆ ಉಮಾಶ್ರೀಯವರಿಗೆ ಮಣೆ ಹಾಕುವ ಮೂಲಕ ಇಂದಿಗೂ ಇವರಿಬ್ಬರ ಕಾರ್ಯಕ್ಷಮತೆಯೇ ಇಲ್ಲಿ ಮೇಲುಗೈ.
ಎರಡು ಬಾರಿ ಸಿದ್ದು ಸವದಿ ಹಾಗು ಒಂದು ಬಾರಿ ಉಮಾಶ್ರೀ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಅಗ್ನಿ ಪರೀಕ್ಷೆ ಎದುರಿಸುವ ತವಕದಲ್ಲಿರುವಾಗಲೇ ಈ ಬಾರಿ ಉಭಯ ಪಕ್ಷಗಳಲ್ಲಿ ಆಕಾಂಕ್ಷಿಗಳ ಪಟ್ಟಿ ತೀವ್ರ ಪ್ರಬಲವಾಗಿದ್ದು, `ಸ್ಥಳೀಯ’ ಎಂಬ ಸಂದೇಶ ಒಂದೆಡೆಯಾದರೆ, ನೇಕಾರಿಕೆಯ ಮತಗಳೇ ನಿರ್ಣಾಯವಾಗಿರುವ ಕಾರಣ `ನೇಕಾರ’ನಿಗೆ ಟಿಕೆಟ್ ನೀಡಬೇಕೆಂಬ ಕೂಗು ಎರಡೂ ಪಕ್ಷಗಳಲ್ಲಿ ಪ್ರತಿಧ್ವನಿಸುತ್ತಿದೆ.
ಇವೆಲ್ಲದರ ಮಧ್ಯ ಕಾಂಗ್ರೆಸ್ ಮತ್ತು ಬಿಜೆಪಿ ಹೈಕಮಾಂಡ್‌ನಲ್ಲಿ ಬಂಡಾಯದ ಬೇಗುದಿಗೆ ಶಮನ ಮಾಡುವಲ್ಲಿ ಶತಾಯ-ಗತಾಯ ಪ್ರಯತ್ನದಲ್ಲಿದ್ದು, ಜಾತಿ ಲೆಕ್ಕಾಚಾರಕ್ಕಿಂತಲೂ ಸ್ಥಳೀಯ ಹಾಗು ನೇಕಾರರಜೊತೆಗೆ ಹಾಲಿ-ಮಾಜಿಗಳ ಪರಿಶೀಲನೆ ಹೆಚ್ಚಾಗಿದೆ.
ಕಾಂಗ್ರೆಸ್‌ನಿಂದ ಈ ಬಾರಿ ನೇಕಾರ ಸಮುದಾಯದಿಂದ ಡಾ. ಎಂ.ಎಸ್. ದಡ್ಡೇನವರ, ವೈದ್ಯರಾದ ರಬಕವಿಯ ಡಾ. ಪದ್ಮಜೀತ ನಾಡಗೌಡ ಪಾಟೀಲ, ಮಹಾಲಿಂಗಪೂರದ ಡಾ. ಎ.ಆರ್. ಬೆಳಗಲಿ, ಸಿದ್ದು ಕೊಣ್ಣೂರ ಹೀಗೆ ಸಾಲು ಸಾಲು ಪಟ್ಟಿಯೇ ಮುಂದೆಯಿದ್ದರೆ, ಬಿಜೆಪಿಯಿಂದ ಡಾ. ಎಂ.ಎಸ್. ದಾನಿಗೊಂಡ, ಕಿರಣಕುಮಾರ ದೇಸಾಯಿ, ರಾಜೇಂದ್ರ ಅಂಬಲಿ, ಮನೋಹರ ಶಿರೋಳ, ಮಹಾದೇವ ಮಾರಾಪುರ, ಭೀಮಶಿ ಮಗದುಮ್ ಸೇರಿದಂತೆ ಅನೇಕ ಅತೃಪ್ತರು ಒಂದೆಡೆಯಾಗಿ ಪಕ್ಷದ ಹೈಕಮಾಂಡ್‌ಗೆ ತಲೆನೋವಾಗಿದ್ದಾರೆ.
*ಬಂಡಾಯದ ಮಂತ್ರ*
ಉಭಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಯಾವದೇರೀತಿ ಬಂಡಾಯ ಅಥವಾ ಪಕ್ಷೇತರರಾಗಿ ಚುನಾವಣೆಗೆ ಧುಮುಕುವ ಸ್ಪಷ್ಟ ಸಂದೇಶ ನೀಡಿಲ್ಲವಾದರೂ ಇಡೀ ತೇರದಾಳ ಮತಕ್ಷೇತ್ರಾದ್ಯಂತ ಆಯಾ ಪಕ್ಷಗಳ ಚಿಹ್ನೆಗಳೊಂದಿಗೆ ಪ್ರಚಾರ ಹಾಗು ಬೆಂಬಲದ ಮನವಿಗೆ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿರುವದು ಸಾಮಾನ್ಯವಾಗಿದೆ.
*ಜಾತಿ ಲೆಕ್ಕಾಚಾರವಿಲ್ಲ*
ಮೆಲ್ನೋಟಕ್ಕೆ ಈ ಬಾರಿ ಯಾವದೇ ಜಾತಿ ಲೆಕ್ಕಾಚಾರ ತೇರದಾಳ ವಿಧಾನಸಭಾ ಕ್ಷೇತ್ರಾದ್ಯಂತ ಪಿಸು ಪಿಸು ಮಾತುಗಳು ನಡೆಯುತ್ತಿಲ್ಲ. ಬದಲಾಗಿ ಹೊಸಬರಿಗೆ ಮಣೆ ಹಾಕಬೇಕೆಂಬ ಸಾಮೂಹಿಕ ನಾಯಕತ್ವದೊಂದಿಗೆ ಎರಡೂ ಪಕ್ಷಗಳಿಂದ ಹೈಕಮಾಂಡ್‌ಗೆ ಒತ್ತಡ ಹೇರುತ್ತಿದ್ದು, ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಶೇಷ ಹಾಗು ವಿಭಿನ್ನತೆಯಿಂದ ನಡೆಯಲಿದ್ದು, ಎರಡೂ ಪಕ್ಷಗಳಲ್ಲಿ ಅಭ್ಯರ್ಥಿ ಆಯ್ಕೆ ಮಾತ್ರ ಬೆಣ್ಣೆಯಲ್ಲಿನ ಕೂದಲು ತೆಗೆದಂತಿದ್ದು, ಹೈಕಮಾಂಡ್ ಯಾವ ದಾಳ ಉರುಳಿಸಲಿವೆ ಎಂಬುದನ್ನು ಕಾದು ನೋಡಬೇಕಿದೆ.

Social Plugin