ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ : ಏಷಿಯನ್ ವಿಭಾಗ ಸ್ಪರ್ಧೆಯಲ್ಲಿ ವಿರಾಟಪುರ ವಿರಾಗಿ
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್.ಲಿಂಗದೇವರು ನಿರ್ದೇಶನದ *ವಿರಾಟಪುರ ವಿರಾಗಿ’ ಸಿನಿಮಾ ಮಾರ್ಚ್ 23 ರಿಂದ ನಡೆಯುವ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಏಷಿಯನ್ ವಿಭಾಗದ ಸ್ಪರ್ಧೆಗೆ ಆಯ್ಕೆಯಾಗಿದೆ. ಏಷಿಯನ್ ಸ್ಪರ್ಧೆಯಲ್ಲಿ ಇರಾನ್, ಇಸ್ರೆಲ್, ಜಪಾನ್, ಶ್ರೀಲಂಕಾ, ಬಾಂಗ್ಲಾದೇಶ, ಮರಾಠಿ ಸೇರಿದಂತೆ 14 ಸಿನಿಮಾಗಳನ್ನು ಆಯ್ಕೆ ಮಾಡಲಾಗಿದ್ದು, ಈ ಹದಿನಾಲ್ಕು ಸಿನಿಮಾಗಳಲ್ಲಿ *ವಿರಾಟಪುರ ವಿರಾಗಿ* ಸಿನಿಮಾ ಕೂಡ ಒಂದು. ಚಿತ್ರೋತ್ಸವದಲ್ಲಿ ಇದೊಂದು ಮಹತ್ವದ ವಿಭಾಗ ಆಗಿರುವುದು ವಿಶೇಷ. 
ಹಾನಗಲ್ಲ ಕುಮಾರಸ್ವಾಮಿಗಳ ಜೀವನವನ್ನು ಆಧರಿಸಿದ ಸಿನಿಮಾ ಇದಾಗಿದ್ದು, ಭಾರೀ ಬಜೆಟ್ ಸಿನಿಮಾಗಳೇ ಸೋಲಿನ ಹಾದಿ ಹಿಡಿದಿರುವ ಸಂದರ್ಭದಲ್ಲಿ *ವಿರಾಟಪುರ ವಿರಾಗಿ ಸಿನಿಮಾ ಭಾರೀ ಯಶಸ್ಸು ಕಂಡಿದೆ*. ಸತತ ಮೂವತ್ತೈದು ದಿನಗಳಿಂದ ಹಲವು ಕಡೆ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಕಲಬುರಗಿ ನಗರವೊಂದರಲ್ಲೇ ನೂರು ಪ್ರದರ್ಶನಗಳನ್ನು ಕಂಡು ದಾಖಲೆ ಬರೆದಿದೆ. ಕರ್ನಾಟಕದಾದ್ಯಂತ ಈವರೆಗೂ ಮೂರು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ.
ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ : ಏಷಿಯನ್ ವಿಭಾಗ ಸ್ಪರ್ಧೆಯಲ್ಲಿ ವಿರಾಟಪುರ ವಿರಾಗಿ
ಸಿನಿಮಾ ಬಿಡುಗಡೆಗೆ ಮುನ್ನವೇ 75 ಸಾವಿರಕ್ಕೂ ಅಧಿಕ ಟಿಕೆಟ್ ಮಾರಾಟವಾಗಿ ಹೊಸ ದಾಖಲೆ ಬರೆದಿದ್ದ ಈ ಸಿನಿಮಾ ಈವರೆಗೂ 750ಕ್ಕೂ ಹೆಚ್ಚು ಶೋಗಳು ಹೌಸ್ ಫುಲ್ ಆಗಿವೆ. 62ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಕಲಬುರಗಿಯಲ್ಲೇ 82 ಶೋಗಳು ಹೌಸ್ ಫುಲ್ ಪ್ರದರ್ಶನ ಕಂಡಿದೆ. ಈ ವರ್ಷದಲ್ಲಿ ಹೆಚ್ಚು ಸದ್ದು ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಈ ಚಿತ್ರ ಕೂಡ ಕಾಣಿಸಿಕೊಂಡಿದೆ.
ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡುಗಳು ಕೂಡ ಕೇಳುಗರ ಗಮನ ಸೆಳೆದಿದ್ದು, ಈ ಸಿನಿಮಾವನ್ನು ಜನರಿಗೆ ತಲುಪಿಸುವುದಕ್ಕಾಗಿಯೇ ಹಾನಗಲ್ಲ ಕುಮಾರಸ್ವಾಮಿಗಳ ಭಕ್ತರು ರಥಯಾತ್ರೆ ಮತ್ತು ಗದಗ ಸೇರಿದಂತೆ ಹಲವು ಕಡೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದರು. ರಾಜ್ಯಾದ್ಯಂತ ರಥೆಯಾತ್ರೆ ಪ್ರವಾಸ ಮಾಡಿ, ಸಿನಿಮಾ ಮುಟ್ಟಿಸುವಲ್ಲಿ ಗೆದ್ದಿದೆ.