"ಸಿರಿ ಲಂಬೋದರ ವಿವಾಹ"ಕ್ಕೆ ಇಪ್ಪತ್ತೈದನೇ ದಿನದ ಸಂಭ್ರಮ
ಸೌರಭ್ ಕುಲಕರ್ಣಿ ನಿರ್ದೇಶನದ
 "ಸಿರಿ ಲಂಬೋದರ ವಿವಾಹ"(ಎಸ್ ಎಲ್ ವಿ) ಚಿತ್ರ ಬಿಡುಗಡೆಯಾಗಿ, ಇಪ್ಪತ್ತೈದು ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ. ಈ ಸಂತಸವನ್ನು ಚಿತ್ರತಂಡದ ಸದಸ್ಯರು ಹಂಚಿಕೊಂಡರು.

ನಮ್ಮ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಗೆ ಮನ ತುಂಬಿ ಬಂದಿದೆ. ಎಪ್ಪತ್ತು ವರ್ಷ ದಾಟಿದವರು, ಮಹಿಳೆಯರು ಹೀಗೆ ಎಲ್ಲಾ ತರಹದ ವಯಸ್ಸಿನವರು ನಮ್ಮ ಚಿತ್ರ ನೋಡಿ ಪ್ರೋತ್ಸಾಹಿಸುತ್ತಿದ್ದಾರೆ. ಈ ಚಿತ್ರದಿಂದ ನನಗೂ ಹೊಸ ಅವಕಾಶಗಳು ಬಂದಿದೆ. ನನ್ನ ತಂಡಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ನಾಯಕ ಅಂಜನ್ ಎ ಭಾರದ್ವಾಜ್ ತಿಳಿಸಿದರು.
ನಮ್ಮ ಚಿತ್ರದ ಯಶಸ್ಸು ಖುಷಿ ಕೊಟ್ಟಿದೆ. ಚಿತ್ರ ನೋಡಿದ ಎಲ್ಲರೂ ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ಹೆಚ್ಚು ಇಷ್ಟ ಪಡುತ್ತಿದ್ದಾರೆ ಎಂದರು ನಾಯಕಿ ದಿಶಾ ರಮೇಶ್.

ನಮ್ಮ ತಂಡದ ಸದಸ್ಯರು ಹೇಳಿದ ಹಾಗೆ ಜನ ನಮ್ಮ ಚಿತ್ರವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ನನ್ನ ತಂಡದ ಸಹಕಾರ ಹಾಗೂ ಮಾಧ್ಯಮದವರ ಪ್ರೋತ್ಸಾಹ.
 ನಾವು ಹೆಚ್ಚಾಗಿ ಮಲ್ಟಿಪ್ಲೆಕ್ಸ್ ಗಳಲ್ಲೇ ಬಿಡುಗಡೆ ಮಾಡಿದ್ದೆವು. ಅಲ್ಲಿ ಜನ ಬರದಿದ್ದರೆ ಪ್ರದರ್ಶನ ಮಾಡುವುದಿಲ್ಲ. ಹಾಗಾಗಿ ನಮ್ಮ ಚಿತ್ರ ಇಪ್ಪತ್ತೈದು ದಿನ ಪೂರೈಸಿದೆ ಎಂದರೆ ಜನಮೆಚ್ಚುಗೆಯೇ ಕಾರಣ. ಓಟಿಟಿ ಹಾಗೂ ಟಿವಿ ರೈಟ್ಸ್ ಬಗ್ಗೆ ಸಹ ಮಾತುಕತೆ ನಡೆದಿದೆ ಎಂದು ನಿರ್ದೇಶಕ ಸೌರಭ್ ಕುಲಕರ್ಣಿ ಮಾಹಿತಿ ನೀಡಿದರು‌.

ಚಿತ್ರರಂಗದ ಇಂತಹ ಪರಿಸ್ಥಿತಿಯಲ್ಲಿ ಚಿತ್ರ ಇಪ್ಪತ್ತೈದು ದಿನ ಪೂರೈಸಿದೆ ಎಂದರೆ ನಿಜಕ್ಕೂ ಖುಷಿಯ‌ ವಿಚಾರ. ಈ ತಂಡದಿಂದ ಒಳ್ಳೆಯ ಚಿತ್ರಗಳು ಬರಲಿ ಎಂದು ನಟ ಮಂಡ್ಯ ರಮೇಶ್ ಹಾರೈಸಿದರು.

ಚಿತ್ರದಲ್ಲಿ ನಟಿಸಿರುವ ಪಿ.ಡಿ.ಸತೀಶ್, ರೋಹಿತ್ ನಾಗೇಶ್, ಸದಾನಂದ ಕಾಳೆ(ಕಾಮಿಡಿ ಕಿಲಾಡಿಗಳು ಖ್ಯಾತಿ),‌ ಸಂಗೀತ ನಿರ್ದೇಶಕ ಸಂಘರ್ಷ್ ಕುಮಾರ್, ಕಾರ್ಯಕಾರಿ ನಿರ್ಮಾಪಕಿ ನಮ್ರತ, ಛಾಯಾಗ್ರಾಹಕ ಕಿಟ್ಟಿ ಕೌಶಿಕ್ ಹಾಗೂ ತಂಡದ ಹಲವು ಸಹ ನಿರ್ಮಾಪಕರುಗಳು ಚಿತ್ರದ ಯಶಸ್ಸಿನ ಸಂತೋಷ ಹಂಚಿಕೊಂಡರು.