ನಾಡಿನ ದೊರೆಯ ಆಗಮನ ನಿರೀಕ್ಷೆಯಲ್ಲಿ ನೇಕಾರರು
ಜಾಗತಿಕ ಪೈಪೋಟಿಯಲ್ಲಿ ತಂತ್ರಜ್ಞಾನ ವೈಫಲ್ಯದಿಂದ ನೇಪಥ್ಯಕ್ಕೆ ನೇಕಾರಿಕೆ
 ಮುಖ್ಯಮಂತ್ರಿಯಾಗಿ ಪ್ರಪ್ರಥಮ ಬಾರಿಗೆ ನೇಕಾರ ನಗರಿ ಬನಹಟ್ಟಿಯಗೆ ಆಗಮಿಸುತ್ತಿರುವ ಬಸವರಾಜ ಬೊಮ್ಮಾಯಿಯವರು ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ನಂತರ ನೇಕಾರ ಪ್ರಧಾನ ಕ್ಷೇತ್ರವಾಗಿರುವ ತೇರದಾಳ ಕ್ಷೇತ್ರದ ಬನಹಟ್ಟಿಯಲ್ಲಿ ಸಾರ್ವಜನಿಕ ಭಾಷಣ ನಡೆಯಲಿದ್ದು, ನಾಡಿನ ದೊರೆಯ ಆಗಮನದ ನಿರೀಕ್ಷೆಯಲ್ಲಿರುವ ನೇಕಾರರು ಕೊಡುಗೆಯ ನಿರೀಕ್ಷೆಯಲ್ಲಿದ್ದಾರೆ.
ಕಳೆದ ಬಜೆಟ್‌ನಲ್ಲಿ 2 ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, 5 ಎಚ್‌ಪಿವರೆಗೆ ಉಚಿತ ವಿದ್ಯುತ್, ನೇಕರ ಸಮ್ಮಾನ್ ಯೋಜನೆಯಲ್ಲಿ ತಲಾ5 ಸಾವಿರ ರೂ. ಅನುಷ್ಠಾನಗೊಂಡಿದೆ. ನೇಕಾರರ ಪ್ರಮುಖ ಬೇಡಿಕೆಯಾಗಿರುವ ಜವಳಿ ಪಾರ್ಕ್ ನಿಶ್ಚಿತವಾಗಿ ಒದಗಿಸುವದಾಗಿ ಬಜೆಟ್ ಪೂರ್ವದಲ್ಲಿ ಬನಹಟ್ಟಿಯಲ್ಲಿ ನಡೆದ ಬಹಿರಂಗ ಭಾಷಣದಲ್ಲಿ ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸ್ಪಷ್ಟಪಡಿಸಿದ್ದರು. ಆದರೆ ಜಾರಿಯಾಗದೆ ತೀವ್ರ ನಿರಾಶೆಗೆ ಕಾರಣವಾಗಿದೆ.
ಕೋನ್ ಡೈಯಿಂಗ್
ನೇಕಾರಿಕೆ ಉದ್ದಿಮೆಯ ಅಭಿವೃದ್ಧಿಗೆ ದಶಕದ ಹಿಂದೆಯೇ ಮುಖ್ಯವಾದ ಕೋನ್ ಡೈಯಿಂಗ್ ಇನ್ನೂ ನಿರ್ಮಾಣವಾಗಿಲ್ಲ. ಇದರಿಂದ ಸೀರೆಗಳ ಉತ್ಪಾದನೆಯಲ್ಲಿ ವಿವಿಧ ಬಣ್ಣ-ಬಣ್ಣದ ರೀತಿಯಲ್ಲಿ ವೈಭವದ ಸೀರೆಗಳನ್ನು ತಯಾರಿಸುವ ಮೂಲಕ ಜವಳಿ ಕ್ಷೇತ್ರಕ್ಕೆ ಹೊಸ ಸ್ಪರ್ಶ ದೊರಕುವಲ್ಲಿ ಕಾರಣವಾಗಲಿದೆ.
ಮಾರುಕಟ್ಟೆಯಿಲ್ಲ
 ಇಲ್ಲಿನ ಸೀರೆಗಳು ದೇಶವಷ್ಟೇ ಅಲ್ಲ ಇದೀಗ ವಿದೇಶಕ್ಕೂ ತೆರಳುತ್ತಿವೆ. ಆದರೆ ಸೀರೆಗಳ ರಫ್ತಿಗೆ ಪ್ರಮುಖವಾದ ಮಾರುಕಟ್ಟೆ ಸಮಸ್ಯೆ ಕಾರಣ ಸರ್ಕಾರದಿಂದ ಜವಳಿ ಮಾರುಕಟ್ಟೆ ಅನಿವಾರ್ಯವಾಗಿದೆ.
ಕೆಎಚ್‌ಡಿಸಿ ಪುನಶ್ಚೇತನ
 ಹುಬ್ಬಳ್ಳಿ ನಂತರದ ಪ್ರಧಾನ ಕಛೇರಿ ಹೊಂದಿರುವ ಕೈಮಗ್ಗ ಅಭಿವೃದ್ಧಿ ನಿಗಮದಡಿ ನೇಯ್ಗೆ ಮಾಡುತ್ತಿರುವ ನೇಕಾರರಿಗೆ ಶಾಶ್ವತ ಉದ್ಯೋಗ ದೊರಕಿಸುವ ಕಾರ್ಯ ಸರ್ಕಾರದ ಹೆಗಲ ಮೇಲಿದೆ. ಕಳೆದೆರಡು ದಶಕಗಳಿಂದ ಇಳಿವಯಸ್ಸಿನಲ್ಲಿರುವ ಕೈಮಗ್ಗ ನೇಕಾರರ ಜೀವನಮಟ್ಟ ಸುಧಾರಣೆಗೆ ಹೊಸ ಯೋಜನೆಗಳನ್ನು ಒದಗಿಸುವ ಮೂಲಕ ಮುಖ್ಯ ವಾಹಿನಿಗೆ ಕರೆತರುವ ಜವಾಬ್ದಾರಿಯಾಗಿದೆ.
ಸಬ್ಸಿಡಿಯಾಗಲಿ: ಕೈಮಗ್ಗ ನೇಕಾರರಿಗೆ ಎನ್‌ಸಿಡಿಸಿಯಿಂದ ಕಚ್ಚಾ ನೂಲು ಖರೀದಿಗೆ ದೊರಕುವ ಶೇ.10 ರಷ್ಟು ರಿಯಾಯ್ತಿಯನ್ನು ಪಾವರ್‌ಲೂಮ್ ನೇಕಾರರಿಗೂ ಒದಗಿಸಬೇಕು. ಇದರಿಂದ ನೇಕಾರಿಕೆ ಕೊಂಚ ಸಬಲ ಹೊಂದಲು ಕಾರಣವಾಗಲಿದೆ.
ಸಾಲ ವಿಸ್ತರಣೆಯಿಲ್ಲ
 ಬಿಡಿಸಿಸಿ ಬ್ಯಾಂಕ್‌ನಿಂದ ಸರ್ಕಾರದ ಆದೇಶದಂತೆ 3 ಲಕ್ಷದವರೆಗೆ ಶೇ.1 ರ ಬಡ್ಡಿ ದರದಲ್ಲಿ ಹಾಗು 5 ಲಕ್ಷದವರೆಗಿನ ಶೇ.3 ಬಡ್ಡಿ ದರದ ಆಕರಣೆ ಸಾಲವನ್ನು 25 ಲಕ್ಷ ರೂ.ಗಳವರೆಗೆ ವಿಸ್ತರಿಸಿದ್ದಲ್ಲಿ, ನೇಕಾರಿಕೆ ಉತ್ತೇಜನ ವಸ್ತು ಖರೀದಿಸಲು ಸಾಧ್ಯವಾಗುವದು.ಸಂಪೂರ್ಣ *ಸಾಲ ಮನ್ನಾ ನಿರೀಕ್ಷೆಯಲ್ಲಿ*
 ಅಲ್ಪ ಪ್ರಮಾಣದಲ್ಲಿರುವ ನೇಕಾರರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂಬ ಕೂಗು ನೇಕಾರರದ್ದಾಗಿದೆ. ಅತ್ಯಂತ ದಯನೀಯ ಸ್ಥಿತಿಯಲ್ಲಿರುವ ನೇಕಾರ ವರ್ಗಕ್ಕೆ ಸಾಲಮನ್ನಾ ಅನಿವಾರ್ಯವಾಗಿದೆ. 
ಸಾಮಗ್ರಿ ಖರೀದಿಗೆ ಸಬ್ಸಿಡಿ
 ಹೊಸ ಹೊಸ ತಂತ್ರಜ್ಞಾನದಲ್ಲಿರುವ ಜವಳಿ ಇಲಾಖೆಯಲ್ಲಿ ಉಚಿತವಾಗಿ ನೇಕಾರರಿಗೆ ತರಬೇತಿ ಒದಗಿಸುವ ಅವಶ್ಯಕತೆಯಿದೆ.
 ಸಾಮಗ್ರಿ ಖರೀದಿಯಲ್ಲಿ ಸಬ್ಸಿಡಿಯನ್ನಾಗಿಸಿದ್ದಲ್ಲಿ ಜವಳಿ ಉನ್ನತೀಕರಣಕ್ಕೆ ಹೊಸ ಆಯಾಮ ಸೃಷ್ಟಿಯಾಗುವದು. ಜನಪ್ರತಿನಿಧಿಗಳು ಇವೆಲ್ಲವನ್ನೂ ಜಾರಿಗೆ ತಂದರೂ ಅಧಿಕಾರಿಗಳು ಮಾತ್ರ ತಾರತಮ್ಯವೆಸಗುತ್ತ ಷರತ್ತುಗಳನ್ನು ಅನ್ವಯಿಸುವದಲ್ಲದೆ ನೇಕಾರರು ಅಭಿವೃದ್ಧಿ ಹೊಂದದಿರುವಂತೆ ಯೋಜನೆ ರೂಪಿಸುವಲ್ಲಿ ಕಾರಣವಾಗಿದೆ.
ಗುಡಿ ಕೈಗಾರಿಕೆಯನ್ನೇ ಅವಲಂಬಿಸಿರುವ ಇಲ್ಲಿನ ನೇಕಾರರಿಗೆ ತರಬೇತಿ ಹಾಗು ಹೊಸ ಹೊಸ ತಂತ್ರಜ್ಞಾನದ ಮಾಹಿತಿ ಅವಶ್ಯವಿದೆ. ಜವಳಿ ಕ್ರಾಂತಿಗೆ ಅನುಕೂಲವಾಗುವಂತೆ ಕಮಿಟಿ ಸದಸ್ಯರನ್ನು ಅನುಭವಿಗಳಿಂದ ನೇಮಕ ಮಾಡುವ ಮೂಲಕ ಕಟ್ಟಕಡೆಯ ನೇಕಾರನ ಅಭಿಪ್ರಾಯಗಳನ್ನು ಸ್ವೀಕರಿಸಿ ಯೋಜನೆಗಳನ್ನು ರೂಪಿಸುವಲ್ಲಿ ಕಾರಣವಾಗಬೇಕಿದೆ.