ನೈಪುಣ್ಯತೆ ಕೊರತೆ: ಬದಲಾಗದ ನೇಕಾರಿಕೆ
 ಉತ್ತರ ಕರ್ನಾಟಕದ `ಮ್ಯಾಂಚೆಸ್ಟರ್’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕು ಇದೀಗ ನೇಕಾರರನ್ನು ಹುಡುಕಬೇಕಾದರೆ ದುರ್ಬೀಣು ಬಳಸುವ ಕಾಲ ಒದಗುವಲ್ಲಿ ಸನ್ನಿಹತವಾಗಿದೆ.
ಈಚೆಗಷ್ಟೇ 10 ವರ್ಷಗಳ ಹಿಂದೆ ಇದ್ದ 50 ಸಾವಿರಕ್ಕೂ ಅಧಿಕ ಮಗ್ಗಗಳು ಇದೀಗ ಏಳೆಂಟು ಸಾವಿರಕ್ಕೆ ಸೀಮಿತವಾಗಿವೆ. ಸಾದಾ ಮಸರಾಯಿಯಿಂದ ಪಾಲಿಸ್ಟರ್, ವಿನೂತನ ನಕ್ಷೆ, ಇದೀಗ ಬಿಗ್ ಬಾರ್ಡರ್( ಮದರ್ & ಡಾಟರ್) ನಕ್ಷೆಗಳಿಂದ ದಕ್ಷಿಣವಷ್ಟೇ ಅಲ್ಲದೆ ಉತ್ತರ ಭಾರತದಲ್ಲಿಯೂ ಮಿಂಚುವಂತೆ ಕಾರಣವಾಗಿರುವದು ಸತ್ಯ.
 ಆದರೆ ಕಳೆದ ಐದಾರು ವರ್ಷಗಳಿಂದ ಕಂಪ್ಯೂಟರ್ ಜಕಾರ್ಡ್(ಎಲೆಕ್ಟ್ರಾನಿಕ್) ಮಗ್ಗಗಳು ರಾಜ್ಯದಲ್ಲಿ ಲಗ್ಗೆ ಇಟ್ಟರೂ ನೈಪುಣ್ಯತೆ ಹೊಂದದಿರುವ ನೇಕಾರರಿಂದ ಈ ಮಗ್ಗಗಳಿಂದ ನಿರೀಕ್ಷೆಯಷ್ಟು ಬಳಕೆ ಮಾಡದೆ ನೇಕಾರಿಕೆಯಲ್ಲಿರುವ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ರಾಜ್ಯದ ನೇಕಾರರು ಅದರಲ್ಲೂ ಅತಿ ಹೆಚ್ಚಿನ ಪ್ರಮಾಣದಲ್ಲಿ ನೇಯ್ಗೆ ಮಾಡುವ ರಬಕವಿ-ಬನಹಟ್ಟಿ ನೇಕಾರರೂ ಬದಲಾವಣೆ ಕಾಣದಿರುವದು ಆತಂಕಕ್ಕೆ ಎಡೆಮಾಡಿದೆ.
*ಏನಿದರ ವಿಶೇಷ?:*
 ಈಗಾಗಲೇ ಇರುವ ವಿದ್ಯುತ್ ಮಗ್ಗಗಳಿಂದ ವಿನ್ಯಾಸ, ಗುಣಮಟ್ಟ ಸೇರಿದಂತೆ ಎಲ್ಲ ರೀತಿಯಿಂದಲೂ ಅತ್ಯಂತ ಪರಿಣಾಮಕಾರಿ ಹಾಗು ಮಾರುಕಟ್ಟೆಯಲ್ಲಿ ಬಲು ದುಬಾರಿ ಬೆಲೆಯಲ್ಲಿ ನಿರಾಯಾಸವಾಗಿ ಮಾರಾಟವಾಗುವಷ್ಟು ಕೌಶಲ್ಯತೆ ಹೊಂದಿರುವ ಸೀರೆಗಳಾಗಿ ನೇಯ್ಗೆಯ ನೈಪುಣ್ಯತೆ ಹೊಂದಿರುತ್ತವೆ.
 ಸದ್ಯ ಮಾರುಕಟ್ಟೆಯಲ್ಲಿರುವ ಸೀರೆಗಿಂತಲೂ ಮೂರ‍್ನಾಲ್ಕು ಪಟ್ಟು ಹೆಚ್ಚಿನ ದರವಿದ್ದರೂ ಗ್ರಾಹಕರು ಈ ಸೀರೆಗಳ ಮೋಹಕ್ಕೆ ನಿರಾಯಾಸವಾಗಿ ಓಲೈಕೆಯಾಗುವದರ ಜೊತೆಗೆ ಅತ್ಯಂತ ಅತ್ಯಾಕರ್ಷಕವಾಗಿ ನಕ್ಷೆ, ನೇಯ್ಗೆಯಿಂದ ಗ್ರಾಹಕರ ಮನಸೆಳೆಯುವಲ್ಲಿ ಎಲೆಕ್ಟ್ರಾನಿಕ್ ಜಕಾರ್ಡ್ ಮಗ್ಗಗಳ ಸೀರೆಗಳು ಸೈ ಎನ್ನಿಸಿಕೊಳ್ಳುತ್ತವೆ.
ಸಾಮಾನ್ಯವಾಗಿ ಕಾರ್ಯನಿರತ ವಿದ್ಯುತ್ ಮಗ್ಗಗಳಲ್ಲಿ ವಿನ್ಯಾಸವನ್ನು ಪ್ರತಿ ಬಾರಿ ಬದಲಾಯಿಸಲು ಪ್ರತಿಯೊಂದು ಬಾರಿಯ ಯಾಂತ್ರಿಕ ಸೆಟ್ಟಿಂಗ್ ಬದಲಾಯಿಸಿಕೊಳ್ಳಬೇಕಾಗುತ್ತದೆ. ಈ ತೊಂದರೆಯನ್ನು ತಪ್ಪಿಸಲು ಹಾಗೂ ಕನಿಷ್ಠ ವೆಚ್ಚದಲ್ಲಿ ಹೆಚ್ಚಿನ ವಿನ್ಯಾಸವನ್ನು ಪಡೆಯಲು ಎಲೆಕ್ಟ್ರಾನಿಕ್ ಜಕಾರ್ಡ್ ನ್ನು ಪರಿಚಯಿಸಲಾಗಿದೆ. 
ಇದು ಸೀರೆಗಳಲ್ಲಿ ವಿವಿಧ ಡಿಸೈನ್‌ಗಳನ್ನು ಅಳವಡಿಸಲು ಅನುಕೂಲವಾಗಿದೆ.
*ವೆಚ್ಚ:*
ಘಟಕವನ್ನು ತಯಾರಿಸಲು ಸುಮಾರು 5 ಲಕ್ಷ ರೂ.ಗಳವರೆಗೆ ಬೇಕು. ಸರ್ಕಾರದ ಸಹಾಯ ಧನವನ್ನಾಗಿ ಸಾಮಾನ್ಯ ವರ್ಗಕ್ಕೆ ಶೇ.50 ರಷ್ಟು ಹಾಗು ಬ್ಯಾಂಕ್ ಸಾಲವನ್ನೂ ನೀಡುವ ಯೋಜನೆ ಸರ್ಕಾರ ವಹಿಸಿಕೊಂಡಿದ್ದು, ಪ.ಜಾತಿ ಹಾಗು ಪಂಗಡದ ಕುಟುಂಬಗಳಿಗೆ ಶೇ.90 ರಷ್ಟು ರಿಯಾಯ್ತಿಯಿದೆ. 
ಇದರಿಂದ ನೇಕಾರರು ವಿವಿಧ ರೀತಿಯ ಡಿಸೈನ್‌ಗಳ ಬಟ್ಟೆಗಳನ್ನು ಸುಲಭವಾಗಿ ತಯಾರಿಸಿ ಉತ್ಪಾದನೆಗೆ ಹೆಚ್ಚಿನ ಬೆಲೆ ಪಡೆಯಲು ಸಹಕಾರಿಗಿದ್ದರೂ ಸೀರೆಗಳ ಉತ್ಪಾದನೆಯಲ್ಲಿ ನಿರೀಕ್ಷೆಯಷ್ಟು ಬಾರದಿರುವದು ವಿಶೇಷ.
*ನೇಕಾರರ ಕೊರತೆ*
 ಮೊದಲೇ ನೇಕಾರಿಕೆ ಉದ್ಯಮ ಕ್ಷೀಣಿಸುತ್ತಿದ್ದು, ಲಕ್ಷಗಟ್ಟಲೆ ಇದ್ದ ನೇಕಾರರ ಸಂಖ್ಯೆ ಇದೀಗ ಸಾವಿರಕ್ಕೆ ತಲುಪಿದ್ದು, ಇನ್ನಷ್ಟು ದಿನಗಳಲ್ಲಿ ಇದರ ಸಂಖ್ಯೆಯೂ ಕುಸಿಯುವ ಆತಂಕ ಎದುರಾಗಿದೆ.
ಹೀಗಿದ್ದಾಗ, ಸಾದಾ ಸೀರೆಗಳನ್ನು ನೇಯ್ಗೆ ಮಾಡುವ ನೇಕಾರರು ಎಲೆಕ್ಟ್ರಾನಿಕ್ ಮಗ್ಗಗಳ ನೇಯ್ಗೆಯ ನೈಪುಣ್ಯತೆ ಕೊರತೆ ಕಾರಣ ತೀವ್ರ ಹಿಂದೇಟು ಹಾಕುವಲ್ಲಿ ಕಾರಣವಾಗಿದೆ.
ಕೇವಲ 20 ಮಗ್ಗ...!:
 ಸುಮಾರು 12 ಸಾವಿರಕ್ಕೂ ಅಧಿಕ ಮಗ್ಗಗಳನ್ನು ಹೊಂದಿರುವ ರಬಕವಿ-ಬನಹಟ್ಟಿ ಅವಳಿ ಪಟ್ಟಣದಲ್ಲಿ ಎಲೆಕ್ಟ್ರಾನಿಕ್ ಜಕಾರ್ಡ್ ಮಗ್ಗಗಳು ಕೇವಲ ಮೂರ‍್ನಾಲ್ಕು ಮಾಲಿಕರ ಹತ್ತಿರ ಒಟ್ಟಾರೆ 20 ರಿಂದ 25 ಮಗ್ಗಗಳು ಮಾತ್ರ ಕಾರ್ಯನಿರ್ವಹಿಸುವಲ್ಲಿ ಕಾರಣವಾಗಿದೆ.
ತರಬೇತಿ ಕಾರ್ಯಾಗಾರ ಅನಿವಾರ್ಯ
ನೇಕಾರರನ್ನು ಪ್ರೋತ್ಸಾಹಿಸುವ ಮೂಲಕ ವಿನೂತನ ಶೈಲಿ ಹಾಗು ಆಧುನಿಕ ಸ್ಪರ್ಶದೊಂದಿಗೆ ನೇಕಾರರ ಜೀವನಮಟ್ಟ ಸುಧಾರಣೆ ಜೊತೆಗೆ ಜವಳಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ನೇಕಾರರಿಗೆ ನಿರಂತರ ತರಬೇತಿ ಕಾರ್ಯಾಗಾರ ಅನಿವಾರ್ಯವಾಗಿದ್ದು, ಎಂದೂ ಸ್ಪಂದನೆ ನೀಡದ ಸರ್ಕಾರಗಳು ಈಗಲಾದರೂ ಅವನತಿಯ ಅಂಚಿನಲ್ಲಿರುವ ನೇಕಾರಿಕೆ ಪುನಶ್ಚೇತನಗೊಳಿಸುವ ಮೂಲಕ ನೇಕಾರ ಕುಟುಂಬಗಳ ಜೀವನಮಟ್ಟ ಸುಧಾರಣೆಗೆ ಮಹತ್ತರ ಯೋಜನೆಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆಯಿದೆ.
ರ‍್ಯಾಪೇರ್(ಲಾಳಿಯಿಲ್ಲದೆ ಗಾಳಿಯಲ್ಲಿ ಎಳೆಯೊಂದಿಗೆ ಸೀರೆ ತಯಾರಾಗುವ)ಮಗ್ಗ ಸೇರಿದಂತೆ ಎಲೆಕ್ಟ್ರಾನಿಕ್ ಜಕಾರ್ಡ್ ಸೇರಿ ಹಲವಾರು ವಿನೂತನ ಮಗ್ಗಗಳು ನೇಕಾರಿಕೆಗೆ ಪೂರಕವಾಗಬೇಕಿತ್ತು. 
ನುರಿತ ನೇಯ್ಗೆದಾರರಿಲ್ಲದೆ, ಸರ್ಕಾರದಿಂದ ಸಬ್ಸಿಯೊಂದಿಗೆ ತರಬೇತಿ ಕೇಂದ್ರ ಸೇರಿದಂತೆ ಯೋಜನೆ ರೂಪಿಸಿದ್ದಲ್ಲಿ ನೇಯ್ಗೆಯಲ್ಲಿ ಬದಲಾವಣೆಗೆ ಹೆಚ್ಚಿನ ಆದ್ಯತೆ ದೊರಕುವದು. ಸರ್ಕಾರದಿಂದ ಮಗ್ಗಗಳ ಖರೀದಿಗೆ ಸಬ್ಸಿಡಿ ಒದಗಿಸುವದನ್ನು ಸ್ವಾಗತಿಸುತ್ತೇನೆ ಎಂದು ಜವಳಿ ಉದ್ಯಮಿ ಗಂಗಾಧರ ಕೊಕಟನೂರ ತಿಳಿಸಿದರು.
`ಸಾದಾ ಮಗ್ಗಗಳ ಮೇಲಿನ ನೇಯ್ಗೆಗಿಂತಲೂ ತೀರಾ ವಿಭಿನ್ನ ಹಾಗು ಮಜೂರಿಯೂ ದುಪ್ಪಟ್ಟು. ನೇಕಾರರು ನೇಯ್ಗೆಯಲ್ಲಿ ಕಾಲ ಕಾಲಕ್ಕೆ ಬದಲಾವಣೆಹೊಂದಿದಾಗ ಮಾತ್ರ ನೇಕಾರಿಕೆ ಹಾಗು ನೇಕಾರ ಅಭಿವೃದ್ಧಿ ಹೊಂದಲು ಸಾಧ್ಯ. ಯುವಕರು ಈ ಕಾರ್ಯಕ್ಕೆ ಮುಂದಾಗದಿರುವದು ಆತಂಕಕ್ಕೆ ಕಾರಣವಾಗಿದೆ ಎಂದು ಯುವ ನೇಕಾರ ಉಮೇಶ ಬಾಬಾನಗರ ಬೇಸರ ವ್ಯಕ್ತಪಡಿಸಿದರು.