ಧರ್ಮವಿಲ್ಲದ ಬದುಕು ಪಶುವಿಗೆ ಸಮಾನ. ಧರ್ಮದಿಂದ ಜನ್ಮ ಪಾವನ, ಧರ್ಮ ನಮ್ಮನ್ನು ಕಪಾಡುವದಷ್ಟೇಯಲ್ಲದೆ ಕರ್ತವ್ಯ, ಧನ, ಭೂಮಿಗಾಗಿ ಬದುಕುವ ಬದಲು ಸಂಸ್ಕಾರಕ್ಕಾಗಿ ಬದುಕು ನಡೆಸಿದ್ದಲ್ಲಿ ಸಾರ್ಥಕ ಜೀವನವೆಂದು ಪರಮಪೂಜ್ಯ ಶ್ರೀ ಚಿಕ್ಕರೇವಣಸಿದ್ಧ ಜಗದ್ಗುರುಗಳು ಹೇಳಿದರು.
ಬನಹಟ್ಟಿಯ ಎಸ್‌ಆರ್‌ಎ ಮೈದಾನದಲ್ಲಿ ಜರುಗಿದ ದೇವರ ದಾಸಿಮಯ್ಯ ಹಟಗಾರ ಸಮಾಜದ ಜಗದ್ಗುರುಗಳಾಗಿ ಪೀಠಾರೋಹಣ ಸ್ವೀಕರಿಸಿ ಮಾತನಾಡಿದ ಅವರು, ಒಗ್ಗಟ್ಟಿನಿಂದ ಎಲ್ಲವೂ ಸಾಧ್ಯ. ವಿಭಜನೆಯಾಗದೆ, ಬೇರ್ಪಡೆಯಾಗದೆ ಸಮಾನ ಮನಸ್ಕ ರೀತಿಯಲ್ಲಿ ಹಟಗಾರ ಸಮುದಾಯದ ಏಳ್ಗೆಗೆ ಎಲ್ಲರೂ ಕಾರ್ಯ ನಿರ್ವಹಿಸಬೇಕು. ಸದ್ಗುಣಗಳ ಅಡಿಪಾಯದೊಂದಿಗೆ ಸದ್ವಿಚಾರಗಳೊಂದಿಗೆ ಪ್ರತಿಯೊಬ್ಬ ಮನುಷ್ಯ ಮುನ್ನಡೆದಲ್ಲಿ ಸುಂದರ ಬದುಕು ನಿರ್ಮಾಣವಾಗುವದೆಂದು ಜಗದ್ಗುರುಗಳು ಹೇಳಿದರು.
ಇದಕ್ಕೂ ಮೊದಲು ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕೆಎಚ್‌ಡಿಸಿ ಕಾಲನಿಯ ದೇವರದಾಸಿಮಯ್ಯ ದೇವಸ್ಥಾನದ ಗೋಪುರ ಕಟ್ಟಡದ ಪೂಜಾ ಸಮಾರಂಭ ಹಾಗು ಜಗದ್ಗುರುಗಳ ವಿಶ್ರಾಂತಿ ಧಾಮ ಕಟ್ಟಡದ ಶಂಕು ಸ್ಥಾಪನೆ ನೆರವೇರಿತು.
ಇದೇ ಸಂದರ್ಭ ಶ್ರೀಗಳ ತುಲಾಭಾರ ಕಾರ್ಯಕ್ರಮವು ಹುಲ್ಯಾಳ ಗ್ರಾಮದ ಜನತೆಯಿಂದ ಜರುಗಿತು.ಬೀದರ ಚಿದಂಬರ ಆಶ್ರಮದ ಶಿವಕುಮಾರ ಸ್ವಾಮೀಜಿ ಪೀಠಾರೋಹಣ ನೆರವೇರಿಸಿ ಮಾತನಾಡಿ, ಜಾತಿ ಬಿಟ್ಟು ಧರ್ಮದಿಂದ ನಡೆಯಬೇಕು. ಸಂಘಟನೆಯನ್ನು ಉತ್ತಮವಾಗಿ ಜೀವನದಲ್ಲಿ ಅಳವಡಿಸಿಕೊಂಡು ಅಧರ್ಮ ಬಿಟ್ಟುಧರ್ಮದ ಮಾರ್ಗದಲ್ಲಿ ನಡೆಯಬೇಕು. ಭಕ್ತರು ಕೊನೆಯವರೆಗೂ ಭಕ್ತರಾಗಿಯೇ ಇರಬೇಕು. ಸಿದ್ಧಾರೂಢರ ಪರಂಪರೆ ದೇಶವಷ್ಟೇ ಅಲ್ಲದೆ ಅಂತರಾಷ್ಟ್ರೀಯ ಮಟ್ಟದವರೆಗೆ ಕೀರ್ತಿ ಹೊಂದಬೇಕಾದರೆ ಅಕ್ಕಲಕೋಟ ಶರಣರೇ ಕಾರಣರಾಗಿದ್ದು, 14 ಭಾಷಾ ಪಂಡಿತರಾಗಿದ್ದ ಅವರು ಪರ್ಷಿಯನ್ ಜನಾಂಗದ ಸುಮಾರು ಮೂರು ನೂರಕ್ಕೂ ಅಧಿಕ ಶಿಷ್ಯ ವೃಂದವನ್ನಾಗಿಸಿದ್ದರು.
ಅಂತಹ ಶಕ್ತಿ ಹೊಂದಿರುವ ಅಕ್ಕಲಕೋಟ ಮಠದ ಶರಣರು ಹಟಗಾರ ಪೀಠದ ಜಗದ್ಗುರುಗಳಾಗಿರುವದು ವಿಶೇಷವೆಂದರು.
ನೇಕಾರ ಮುಖಂಡ ಶಂಕರ ಸೊರಗಾಂವಿ ಮಾತನಾಡಿ, 20 ವರ್ಷಗಳ ಹಟಗಾರ ಸಮಾಜದ ಗುರುಪೀಠದ ಕನಸು ಇಂದು ಸಾಕಾರಗೊಂಡಿದೆ. ಸರ್ಕಾರ ನೇಕಾರಿಕೆಗೆ ಉತ್ತೇಜನ ನೀಡುವದರ ಜೊತೆಗೆ ಬಟ್ಟೆಗೆ ನಿಗದಿತ ದರ ಅನುಕೂಲದ ಜೊತೆಗೆ ಹತ್ತಿ ಬೆಲೆಯನ್ನೂ ನಿಯಂತ್ರಣಕ್ಕೆ ತಂದು ನೇಕಾರ ಜನಾಂಗಕ್ಕೆ ಪೂರಕವಾಗಬೇಕಿದೆ.
ಸರ್ಕಾರದ ಯೋಜನೆಗಳು ನೇಕಾರಿಕೆಗೆ ಸಂಬಂಧಿಸಿದ ಯೋಜನೆಗಳು ಕೇವಲ ಕಾಗದದಲ್ಲಿ ಮಾತ್ರವಿದ್ದು, ಅನುಷ್ಠಾನಗೊಳ್ಳುವಲ್ಲಿ ಇಂದಿಗೂ ಸಾಧ್ಯವಾಗುತ್ತಿಲ್ಲ. ರೈತರಂತೆ ನೇಕಾರರಿಗೂ ಸಹಕಾರಿ ರಂಗ ಸೇರಿದಂತೆ ಉದ್ಯೋಗದಲ್ಲಿಯೂ ಸಮಾನತೆ ನೀಡಿದ್ದಲ್ಲಿ ಜವಳಿ ಕ್ರಾಂತಿಯಾಗುವಲ್ಲಿ ಸಾಧ್ಯವೆಂದರು.ಪ್ರಮುಖವಾಗಿ ನೇಕಾರರ ನಿಗಮ ಮಂಡಳಿಗಳಲ್ಲಿ ನೇಕಾರರಿದ್ದಲ್ಲಿ ಅಲ್ಲಿನ ಸಮಸ್ಯೆಗಳನ್ನು ಸರ್ಕಾರದತ್ತ ಗಮನ ಸೆಳೆಯುವಲ್ಲಿ ಸಾಧ್ಯವಾಗುವದು. ಸ್ವಾತಂತ್ರ್ಯಾ ನಂತರ ದಿನಗಳಿಂದಲೂ ವಿಧಾನಸಭೆಗೆ ಈ ಭಾಗದ ನೇಕಾರ ಪ್ರತಿನಿಧಿ ಪ್ರವೇಶ ಪಡೆಯದಿರುವದು ವಿಷಾದ. ಪ್ರತಿಯೊಬ್ಬರೂ ಸಮಾಜ ಸಂಘಟನೆಯ ಜೊತೆಗೆ ನೇಕಾರಿಕೆ ಉಳಿಸಿ ಬೆಳೆಸುವ ಹೋರಾಟ ಅನಿವಾರ್ಯವಾಗಿರುವದು ಬೇಸರ ತರುವಂಥದ್ದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಪಿ.ವಿ. ಪಟ್ಟಣ, ಶಾಂತಿಪ್ರಿಯ ಸಮಾಜವಾಗಿರುವ ಹಟಗಾರ ಧ್ವಜವನ್ನು ಶ್ವೇತ ವರ್ಣದಲ್ಲಿ ಷಟಸ್ಥಲ ಧ್ವಜ ನಿರ್ಮಾಣಗೊಂಡಿದೆ.
ರಾಜಕಾರಣವಿಲ್ಲದ ಸಮಾಜವಾಗಿ ಎಲ್ಲವನ್ನೂ ಮರೆತು ಸೇವೆ ಮಾಡಿ ಧರ್ಮ ದಂಡದ ಮೂಲಕ ಸಮಾಜ ಒಗ್ಗೂಡುವಲ್ಲಿ ಕಾರಣವಾಗಿದೆ ಎಂದರು.
ಶಾಸಕ ಸಿದ್ದು ಸವದಿ, ಮಾಜಿ ಸಚಿವೆ ಉಮಾಶ್ರೀ, ಸಕ್ಕರೆ ಉದ್ಯಮಿ ಸಂಗಮೇಶ ನಿರಾಣಿ ಮಾತನಾಡಿದರು. ಸಂಗಮೇಶ ಉಪಾಸೆ ಉಪನ್ಯಾಸ ನೀಡಿದರು.
ವೇದಿಕೆಯ ಅಧ್ಯಕ್ಷತೆಯನ್ನು ದೇವರದಾಸಿಮಯ್ಯ ಹಟಗಾರ ಜಗದ್ಗುರು ಪೀಠಾರೋಹಣ ಸಮಿತಿ ಗೌರವಾಧ್ಯಕ್ಷ ಡಾ. ಎಂ.ಎಸ್. ದಡ್ಡೇನವರ ವಹಿಸಿದ್ದರು. ಮಹಾಲಿಂಗಪೂರದ ಸಹಜಾನಂದ ಶ್ರೀಗಳು, ನೀರಲಕೇರಿಯ ಘನಲಿಂಗ ಮಹಾಸ್ವಾಮಿಗಳು, ಮೈಂದರಗಿಯ ಅಭಿನವ ರೇವಣಸಿದ್ಧ ಪಟ್ಟದೇವರು, ಆಳಂದದ ಶ್ರೀ ಚನ್ನಬಸವ ಪಟ್ಟದೇವರು, ಮುದನೂರಿನ ಈಶ್ವರಾನಂದ ಶ್ರೀಗಳು, ಹಿರೇಮಠದ ಶರಣ ಬಸವ ಶಿವಾಚಾರ್ಯರು, ಗುಳೇದಗುಡ್ಡದ ಬಸವರಾಜ ಪಟ್ಟದಾರ್ಯರು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ವೇದಿಕೆ ಮೇಲಿದ್ದರು.

Social Plugin