ಲೇಖನ : ಶ್ರೀ ಗಣೇಶ ಕಾಸರಗೋಡು ಹಿರಿಯ ಸಿನಿಮಾ ಪತ್ರಕರ್ತರು
ನಡೆದದ್ದು ಏನಪ್ಪಾ ಅಂದ್ರೆ : 'ಹೊಸಬೆಳಕು' ಸಿನಿಮಾದ ನಂತರ ರಾಜಕುಮಾರ್ ಅವರಿಗಾಗಿ ಭಗವಾನ್ ಆಯ್ಕೆ ಮಾಡಿಕೊಂಡ ಸಬ್ಜೆಕ್ಟ್ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕಾದಂಬರಿ 'ಸುಬ್ಬಣ್ಣ'. ಆಯ್ಕೆ ಮಾಡಿಕೊಂಡ ನಂತರ ಅದರ ಹಕ್ಕು ಪಡೆದುಕೊಂಡ ಭಗವಾನ್ 'ಸುಬ್ಬಣ್ಣ' ಕಾದಂಬರಿಯ ಒಂದು ಕಾಪಿಯನ್ನು ಪಾರ್ವತಮ್ಮನವರಿಗೆ ಓದಲು ಕೊಡುತ್ತಾರೆ. ಓದಿದ ನಂತರ ರಾಜಕುಮಾರ್ ಅವರು ಕುತೂಹಲಕ್ಕೆಂದು ಕಥೆ ಹೇಳಲು ಪಾರ್ವತಮ್ಮನವರಲ್ಲಿ ಕೇಳಿಕೊಳ್ಳುತ್ತಾರೆ. ಪಾರ್ವತಮ್ಮ ಕಥೆ ಹೇಳುತ್ತಾರೆ. ಆದರೆ ರಾಜಕುಮಾರ್ ಅವರಿಗೆ ಕಥೆ ಇಷ್ಟವಾಗುವುದಿಲ್ಲ. ಮಾರನೇ ದಿನ ಭಗವಾನ್ ಅವರನ್ನು ಕರೆಸಿಕೊಂಡ ಪಾರ್ವತಮ್ಮ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡು ಬಿಡುತ್ತಾರೆ : 'ಅದಿನ್ನೆಂಥಾ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದೀಯಪ್ಪಾ? ಹೆಂಡತಿ-ಮಕ್ಕಳನ್ನು ಸಾಕಲು ಸಾಧ್ಯವಿಲ್ಲದೇ ಬೀದೀಲಿ ಬಿಟ್ಟು ಹೋಗೋ ಕ್ಯಾರೆಕ್ಟರ್... ಇದನ್ನು ರಾಜಕುಮಾರ್ ಮಾಡ್ಬೇಕಾ? ನಿನ್ನ ತಲೆ-ಗಿಲೆ ನೆಟ್ಟಗಿದ್ಯಾ? ಈ ಪಾತ್ರವನ್ನು ರಾಜಕುಮಾರ್ ಮಾಡಿದ್ರೆ ಜನ ಏನು ತಿಳ್ಕೋತಾರೆ ಎಂಬ ಕನಿಷ್ಠ ಜ್ಞಾನಾನಾದ್ರೂ ಬೇಡ್ವಾ ನಿನ್ಗೆ. ರಾಜಕುಮಾರ್ ಅವರನ್ನು ಹಾಕಿ ಈ ಸಿನಿಮಾ ಮಾಡೋ ಯೋಚ್ನೆ ನಿನ್ನ ತಲೇಲಿ ಇದ್ರೆ ಆ ತಲೆಯನ್ನೇ ತೆಗೆದು ಬಿಡುತ್ತೇನೆ ಹುಷಾರ್! ಹೊರಟು ಹೋಗು ಇಲ್ಲಿಂದ, ನನ್ನ ಮುಂದೆ ನಿಂತ್ಕೋಬೇಡ...' - ಎಂದು ಪಾರ್ವತಮ್ಮನವರು ದಬಾಯಿಸಿ ಕಳಿಸಿದ್ದನ್ನು ಭಗವಾನ್ ಅವರು ಯಾವ ಮುಚ್ಚುಮರೆಯೂ ಇಲ್ಲದೇ ನನ್ನ ಮುಂದೆ ಹೇಳಿಕೊಂಡಿದ್ದರು. ಆಗ ತಾನೇ ಪಾರ್ವತಮ್ಮನವರು ಗ್ರಹಚಾರ ಬಿಡಿಸಿದ್ದಷ್ಟೇ ಏನೋ ಎಂಬಂತೆ ಭಗವಾನ್ ಅವರು ತಮ್ಮ ಬೋಳು ತಲೆಯನ್ನು ಗಟ್ಟಿಯಾಗಿ ಹಿಡಿದು ಕೊಂಡಿದ್ದರು! ಇದೂ ಕೂಡಾ ಕ್ಯಾಮರಾದಲ್ಲಿ ರೆಕಾರ್ಡ್ ಆಗಿರುವುದು ಭಗವಾನ್ ಗಮನಕ್ಕೆ ಬಂದಿರಲಿಲ್ಲ...!!!
∆ ಅಂದ ಹಾಗೆ, ಇಂಥಾ ನೆನಪುಗಳನ್ನು ಮೆಲುಕು ಹಾಕಿದ ಭಗವಾನ್ ಅವರು ಈಗ ಬರಿಯ ನೆನಪಾಗಿ ಹೋಗಿದ್ದಾರೆ... ಓಂ ಶಾಂತಿ...

Social Plugin