ಬಹು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜವಳಿ ಪಾರ್ಕ್ ಘೋಷಣೆಯು ಈ ಬಾರಿಯ ಬಜೆಟ್‌ನಲ್ಲಿ ರಬಕವಿ-ಬನಹಟ್ಟಿ ಜನತೆಗೆ ದೊರಕುವ ಮುನ್ಸೂಚನೆಯನ್ನು ಕಳೆದ ವಾರವಷ್ಟೇ ಇಲ್ಲಿಗೆ ಆಗಮಿಸಿದ್ದ ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಬಹಿರಂಗ ವೇದಿಕೆಯಲ್ಲಿ ನೇಕಾರರಲ್ಲಿ ಸ್ಪಷ್ಟಪಡಿಸಿದ್ದಾರೆ. ಆದರೆ ನೈಜ ಸಂಕಷ್ಟ ಎದುರಿಸುತ್ತಿರುವ ನೇಕಾರರಿಗೆ ಈ ಬಾರಿಯ ಬಜೆಟ್ ಪೂರಕವಾಗುವದೇ ಎಂಬ ನಿರೀಕ್ಷೆಯಲ್ಲಿ ಲಕ್ಷಾಂತರ ನೇಕಾರರು ಎದುರು ನೋಡುವಲ್ಲಿ ಕಾರಣವಾಗಿದೆ.
*ಕೋನ್ ಡೈಯಿಂಗ್
ನೇಕಾರಿಕೆ ಉದ್ದಿಮೆಯ ಅಭಿವೃದ್ಧಿಗೆ ದಶಕದ ಹಿಂದೆಯೇ ಮುಖ್ಯವಾದ ಕೋನ್ ಡೈಯಿಂಗ್ ಇನ್ನೂ ನಿರ್ಮಾಣವಾಗಿಲ್ಲ. ಇದರಿಂದ ಸೀರೆಗಳ ಉತ್ಪಾದನೆಯಲ್ಲಿ ವಿವಿಧ ಬಣ್ಣ-ಬಣ್ಣದ ರೀತಿಯಲ್ಲಿ ವೈಭವದ ಸೀರೆಗಳನ್ನು ತಯಾರಿಸುವ ಮೂಲಕ ಜವಳಿ ಕ್ಷೇತ್ರಕ್ಕೆ ಹೊಸ ಸ್ಪರ್ಶ ದೊರಕುವಲ್ಲಿ ಕಾರಣವಾಗಲಿದೆ.
*ಮಾರುಕಟ್ಟೆಯಿಲ್ಲ
ಇಲ್ಲಿನ ಸೀರೆಗಳು ದೇಶವಷ್ಟೇ ಅಲ್ಲ ಇದೀಗ ವಿದೇಶಕ್ಕೂ ತೆರಳುತ್ತಿವೆ. ಆದರೆ ಸೀರೆಗಳ ರಫ್ತಿಗೆ ಪ್ರಮುಖವಾದ ಮಾರುಕಟ್ಟೆ ಸಮಸ್ಯೆ ಕಾರಣ ಸರ್ಕಾರದಿಂದ ಜವಳಿ ಮಾರುಕಟ್ಟೆ ಅನಿವಾರ್ಯವಾಗಿದೆ.
*ಕೆಎಚ್‌ಡಿಸಿ ಪುನಶ್ಚೇತನ
ಹುಬ್ಬಳ್ಳಿ ನಂತರದ ಪ್ರಧಾನ ಕಛೇರಿ ಹೊಂದಿರುವ ಕೈಮಗ್ಗ ಅಭಿವೃದ್ಧಿ ನಿಗಮದಡಿ ನೇಯ್ಗೆ ಮಾಡುತ್ತಿರುವ ನೇಕಾರರಿಗೆ ಶಾಶ್ವತ ಉದ್ಯೋಗ ದೊರಕಿಸುವ ಕಾರ್ಯ ಸರ್ಕಾರದ ಹೆಗಲ ಮೇಲಿದೆ. ಕಳೆದೆರಡು ದಶಕಗಳಿಂದ ಇಳಿವಯಸ್ಸಿನಲ್ಲಿರುವ ಕೈಮಗ್ಗ ನೇಕಾರರ ಜೀವನಮಟ್ಟ ಸುಧಾರಣೆಗೆ ಹೊಸ ಯೋಜನೆಗಳನ್ನು ಒದಗಿಸುವ ಮೂಲಕ ಮುಖ್ಯ ವಾಹಿನಿಗೆ ಕರೆತರುವ ಜವಾಬ್ದಾರಿಯಾಗಿದೆ.
*ಸಬ್ಸಿಡಿಯಾಗಲಿ
ಕೈಮಗ್ಗ ನೇಕಾರರಿಗೆ ಎನ್‌ಸಿಡಿಸಿಯಿಂದ ಕಚ್ಚಾ ನೂಲು ಖರೀದಿಗೆ ದೊರಕುವ ಶೇ.10 ರಷ್ಟು ರಿಯಾಯ್ತಿಯನ್ನು ಪಾವರ್‌ಲೂಮ್ ನೇಕಾರರಿಗೂ ಒದಗಿಸಬೇಕು. ಇದರಿಂದ ನೇಕಾರಿಕೆ ಕೊಂಚ ಸಬಲ ಹೊಂದಲು ಕಾರಣವಾಗಲಿದೆ.
*ಸಾಲ ವಿಸ್ತರಣೆಯಿಲ್ಲ
ಬಿಡಿಸಿಸಿ ಬ್ಯಾಂಕ್‌ನಿಂದ ಸರ್ಕಾರದ ಆದೇಶದಂತೆ 3 ಲಕ್ಷದವರೆಗೆ ಶೇ.1 ರ ಬಡ್ಡಿ ದರದಲ್ಲಿ ಹಾಗು 5 ಲಕ್ಷದವರೆಗಿನ ಶೇ.3 ಬಡ್ಡಿ ದರದ ಆಕರಣೆ ಸಾಲವನ್ನು 25 ಲಕ್ಷ ರೂ.ಗಳವರೆಗೆ ವಿಸ್ತರಿಸಿದ್ದಲ್ಲಿ, ನೇಕಾರಿಕೆ ಉತ್ತೇಜನ ವಸ್ತು ಖರೀದಿಸಲು ಸಾಧ್ಯವಾಗುವದು.
ಸಂಪೂರ್ಣ ಸಾಲ ಮನ್ನಾ ನಿರೀಕ್ಷೆಯಲ್ಲಿ:
ಅಲ್ಪ ಪ್ರಮಾಣದಲ್ಲಿರುವ ನೇಕಾರರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂಬ ಕೂಗು ನೇಕಾರರದ್ದಾಗಿದೆ. ಅತ್ಯಂತ ದಯನೀಯ ಸ್ಥಿತಿಯಲ್ಲಿರುವ ನೇಕಾರ ವರ್ಗಕ್ಕೆ ಸಾಲಮನ್ನಾ ಅನಿವಾರ್ಯವಾಗಿದೆ.
ಸಾಮಗ್ರಿ ಖರೀದಿಗೆ ಸಬ್ಸಿಡಿ
ಹೊಸ ಹೊಸ ತಂತ್ರಜ್ಞಾನದಲ್ಲಿರುವ ಜವಳಿ ಇಲಾಖೆಯಲ್ಲಿ ಉಚಿತವಾಗಿ ನೇಕಾರರಿಗೆ ತರಬೇತಿ ಒದಗಿಸುವ ಅವಶ್ಯಕತೆಯಿದೆ. ಸಾಮಗ್ರಿ ಖರೀದಿಯಲ್ಲಿ ಸಬ್ಸಿಡಿಯನ್ನಾಗಿಸಿದ್ದಲ್ಲಿ ಜವಳಿ ಉನ್ನತೀಕರಣಕ್ಕೆ ಹೊಸ ಆಯಾಮ ಸೃಷ್ಟಿಯಾಗುವದು. ಜನಪ್ರತಿನಿಧಿಗಳು ಇವೆಲ್ಲವನ್ನೂ ಜಾರಿಗೆ ತಂದರೂ ಅಧಿಕಾರಿಗಳು ಮಾತ್ರ ತಾರತಮ್ಯವೆಸಗುತ್ತ ಷರತ್ತುಗಳನ್ನು ಅನ್ವಯಿಸುವದಲ್ಲದೆ ನೇಕಾರರು ಅಭಿವೃದ್ಧಿ ಹೊಂದದಿರುವಂತೆ ಯೋಜನೆ ರೂಪಿಸುವಲ್ಲಿ ಕಾರಣವಾಗಿದೆ.
ಜವಳಿ ಕ್ರಾಂತಿಗೆ ಅನುಕೂಲವಾಗುವಂತೆ ಕಮಿಟಿ ಸದಸ್ಯರನ್ನು ಅನುಭವಿಗಳಿಂದ ನೇಮಕ ಮಾಉವ ಮೂಲಕ ಕಟ್ಟಕಡೆಯ ನೇಕಾರನ ಅಭಿಪ್ರಾಯಗಳನ್ನು ಸ್ವೀಕರಿಸಿ ಯೋಜನೆಗಳನ್ನು ರೂಪಿಸುವಲ್ಲಿ ಕಾರಣವಾಗಬೇಕಿದೆ. ಒಟ್ಟಾರೆ ಈ ಬಾರಿಯ ಬಜೆಟ್ ನೇಕಾರರಿಗೆ ವರವಾಗುವ ಲಕ್ಷಣಗಳಿದ್ದು, ಯಾವ ರೀತಿ ಸರ್ಕಾರ ಸ್ಪಂದಿಸಲಿದೆ ಎಂಬುದು ಇಂದು ನಿರ್ಧಾರವಾಗಲಿದೆ.

Social Plugin