ತೇರದಾಳದಲ್ಲಿ ನುಡಿ ನಮನ, ಸ್ವರ ನಮನ, ಚಿತ್ರ ನಮನ
ಸಿದ್ಧೇಶ್ವರ ಶ್ರೀಗಳ ಜೀವನವೇ ಒಂದು ಸಂದೇಶ
ತೇರದಾಳ : ಸಕಲರಿಗೂ ಶಾಂತಿ ನೆಮ್ಮದಿ ಸಿಗಲಿ. ನಮ್ಮನ್ನ ನಾವು ತಿಳಿದು ಕೊಳ್ಳುವಂತಾಗಲಿ. ಉತ್ತಮ ಬದಲಾವಣೆ ನಮ್ಮ ಜೀವನದಲ್ಲಾಗಲಿ ಎಂಬುದನ್ನು ಪ್ರವಚನದ ಮೂಲಕ ಜನ ಮಾನಸಕ್ಕೆ ತಿಳಿಹೇಳಿ ಎಲ್ಲ ಸದ್ಭಕ್ತರ ಹೃದಯದಲ್ಲಿ ನೆಲೆಸಿದವರು ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಎಂದು ಹುಲ್ಯಾಳ ಗುರುದೇವ ಆಶ್ರಮದ ಶ್ರೀ ಹರ್ಷಾನಂದ ಮಹಾಸ್ವಾಮಿಗಳು ಹೇಳಿದರು. 
ತೇರದಾಳದ ಶ್ರೀ ಸಿದ್ದೇಶ್ವರ ವಿದ್ಯಾವರ್ಧಕ ಸಂಘದ ಸ್ವಾಮಿ ವಿವೇಕಾನಂದ ಅಂತರಾಷ್ಟ್ರೀಯ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ನುಡಿ ನಮನ, ಸ್ವರ ನಮನ, ಚಿತ್ರ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಪ್ರಕೃತಿಯಿಂದ ಬಂದದ್ದು ಪ್ರಕೃತಿಯಲ್ಲಿ ಲೀನವಾಗಲಿ ಎಂಬ ಇಚ್ಛೆ ಅವರದಾಗಿತ್ತು. ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರ ಜ್ಞಾನವನ್ನು ಕಲ್ಪನೆ ಮಾಡಲು ಸಾಧ್ಯವಿಲ್ಲ. ಅವರದು ಜ್ಞಾನ ಸಮುದ್ರ.
ನಡೆ ನುಡಿ ಒಂದಾಗಿಸಿಕೊಂಡು ಬದುಕಿದವರು. ಸಕಲರಿಗೂ ಸನ್ಮಾರ್ಗ ತೋರಿದವರು. ಅವರೊಬ್ಬ ಮಹಾನ್ ಸಂತ. ಬುದ್ಧ, ಬಸವ, ಮಹಾವೀರ ಹೀಗೆ ಮಹಾತ್ಮರು ಹೋಗಿಲ್ಲ. ಈಗಲೂ ಇದ್ದಾರೆ. ಅವರ ಆಚಾರ ವಿಚಾರಗಳು, ವಚನಗಳು ಇರುವವರೆಗೂ ಅವರು ಇರುತ್ತಾರೆ. ಹಾಗೆಯೇ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಯಾವಾಗಲೂ ಇರುವವರು ಎಂದರು.
ಬನಹಟ್ಟಿಯ ಹಿರಿಯ ಸಾಹಿತಿ ಸಿದ್ದರಾಜ ಪೂಜಾರಿ ಅವರು ನುಡಿ ನಮನ ಅರ್ಪಿಸಿ ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರ ಮಾತು ಸಂಸ್ಕøತಿಯ ಪರಿಮಳ. ಅವರದು ಬಯಲು ಸದೃಶ ವ್ಯಕ್ತಿತ್ವ. ಆಕಾಶಕ್ಕೆ ಆರಂಭ ಎಲ್ಲಿ? ಕೊನೆ ಎಲ್ಲಿ? ಮಾತಿಗೆ ಒಂದು ಲಯ ಇದೆ. ಮಾತಿನ ಲಯವೇ ಸಂಸ್ಕೃತಿ. ಪೂಜ್ಯರ ಮಾತು ಸಂಸ್ಕೃತಿಯ ಪರಿಮಳ ಎಂದರು.
ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಮಹಾಸ್ವಾಮಿಗಳು ಜ್ಯೋತಿ ಬೆಳಗಿಸಿ ಮಾತನಾಡಿ ಆಧ್ಯಾತ್ಮದ ಕಡಲು ಎಂದೂ ಕರಗದ ಮುತ್ತು ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಹೃದಯ ಅರಳುವಂತೆ ನುಡಿಗಳನ್ನು ಹೇಳಿದವರು. ಅಪರೂಪದ ಜಂಗಮ ಅವರ ಆಧ್ಯಾತ್ಮಿಕ ಚೈತನ್ಯ ನಿರಂತರವಾಗಿ ಬೆಳಗುತ್ತದೆ. ಅವರು ಲೋಕದ ಹಿತಕ್ಕಾಗಿ ಬದುಕಿದವರು. ಜ್ಞಾನ ಸೂರ್ಯ  ಎಂದರು.
ಹಳೇ ಹುಬ್ಬಳ್ಳಿ ನೀಲಕಂಠ ಮಠದ ಜಗದ್ಗುರು ಶ್ರೀ ಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಸರಳಾತಿ ಸರಳ ಬದುಕು ಅವರದಾಗಿತ್ತು. ಸದುವಿನಯ ತುಂಬಿ ತುಳುಕುತ್ತಿತ್ತು. ಪರಿಪೂರ್ಣತೆಗೆ, ಪರಿಶುದ್ಧತೆಗೆ ಬೇರಾರಿಗೂ ನಿಲುಕದ ವ್ಯಕ್ತಿತ್ವ, ಈ ಶತಮಾನದ ಸಂತರು ಸಿದ್ದೇಶ್ವರ ಮಹಾಸ್ವಾಮಿಗಳು ಎಂದರು.
ತೇರದಾಳ ವಿರಕ್ತಮಠದ ಶ್ರೀ ಶಿವಕುಮಾರ ದೇವರು, ಹಿರೇಮಠದ ಶ್ರೀ ಗಂಗಾಧರ ದೇವರು ಮಾತನಾಡಿದರು.
ಹನಗಂಡಿ ಸರಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕ ಯಲ್ಲಪ ಇಮಡೆನ್ನವರ, ರೂಪಾ ಬಸವರಾಜ ಬಾಳಿಕಾಯಿ, ಜಮಖಂಡಿ ಪಿ.ಬಿ. ಹೈಸ್ಕೂಲ್ ಚಿತ್ರಕಲಾ ಶಿಕ್ಷಕ ಮಲ್ಲಿಕಾರ್ಜುನ ಹಲಗಲಿ ಸಂತನೆಂದರೆ ಯಾರು? ದಿವ್ಯತೆಯ ಅರಿತವರು.... ಗೀತೆಗೆ ಕುಂಚದಿಂದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರ ಸುಂದರ ಚಿತ್ರ ರಚಿಸಿ, ಚಿತ್ರ ನಮನಗೈದರು.ಬನಹಟ್ಟಿಯ ಸುಭಾಸಗೌಡ ಪಾಟೀಲ ಹಾರ್ಮೋನಿಯಂ ಸಾಥ್ ಹಾಗೂಮುಗಳಖೋಡದ ಪರಶುರಾಮ ಜೋಗಿ ತಬಲಾ ಸಾಥ್‍ಗೆ ಸಹಕರಿಸಿದರು.
ತೇರದಾಳ ತಾಲೂಕು ಹೋರಾಟ ಸಮಿತಿ, ಶ್ರೀ ಜಿನಸೇನಾಚಾರ್ಯ ವಿದ್ಯಾಪೀಠ, ಶ್ರೀ ಪ್ರಭುಲಿಂಗೇಶ್ವರ ಅನ್ನ ಪ್ರಸಾದ ಸಮಿತಿ, ಶ್ರೀ ಸಿದ್ರಾಮಪ್ಪ ದಾನಿಗೊಂಡ ಮೆಮೋರಿಯಲ್ ಟ್ರಸ್ಟ್, ಶ್ರೀ ಸಿದ್ದೇಶ್ವರ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು,  ಶ್ರೀ ಕುವೆಂಪು ಕನ್ನಡ ಯುವಕ ಸಂಘ, ದೇವವಾಣಿ ಪಾಕ್ಷಿಕ ಪತ್ರಿಕೆ ಮತ್ತು ಸ್ವರೂಪ ಸಂದರ್ಶನ ಯೂಟ್ಯೂಬ್ ಚಾನಲ್ ಇನ್ನಿತರರ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು.
ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಬಾಳಿಕಾಯಿ ಸ್ವಾಗತಿಸಿದರು. ಶಿಕ್ಷಕ-ಸಾಹಿತಿ ಮ.ಕೃ.ಮೇಗಾಡಿ ನಿರೂಪಿಸಿದರು. ಗಂಗಾಧರ ಮೋಪಗಾರ ವಂದಿಸಿದರು. ಸೇರಿದ ಭಕ್ತಸಮೂಹ ಮೇಣದಬತ್ತಿ ಬೆಳಗಿ ಅಗಲಿದ ಪೂಜ್ಯರಿಗೆ ನಮನಗಳನ್ನು ಅರ್ಪಿಸಿದರು.
ಕಾರ್ಯಕ್ರಮದ ನಂತರ ಭಕ್ತಾದಿಗಳಿಗೆ ಮಹಾಪ್ರಸಾದ ನಡೆಯಿತು. ಊರ ಧಣಿ ಪ್ರವೀಣ ನಾಡಗೌಡ, ಡಾ.ಮಹಾವೀರ ದಾನಿಗೊಂಡ, ಅಲ್ಲಯ್ಯಾ ದೊಡಮನಿ, ಎಂ. ಸಿ. ಕುಂಚಗನೂರ, ರವಿ ಸಲಬಣ್ಣವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.