ತೇರದಾಳ : ಶತಶತಮಾನಗಳಿಂದ ನಡೆದುಕೊಂಡು ಬಂದಿರುವ ಸಂಕ್ರಮಣದ ಪರ್ವದಲ್ಲಿ ರವಿವಾರ ತೇರದಾಳ ಪಟ್ಟಣದ ಜನತೆ ಮಿಂದು ನಲಿಯಿತು. ಸದ್ಭಕ್ತರ ಉಪವಾಸ, ಕ್ಷೇತ್ರಾಧಿಪತಿ ಶ್ರೀಅಲ್ಲಮ ಪ್ರಭುದೇವರ ಪಾಲಕಿ ಮತ್ತು ನಂದಿ ಕೋಲುಗಳ ಉತ್ಸವ, ಅಭಿಷೇಕ, ಅರ್ಚಕರ ಸಾಮೂಹಿಕ ಮಂತ್ರಪಠಣ, ಎಳ್ಳು-ಬೆಲ್ಲ ವಿನಿಯೋಗ, ಪರಸ್ಪರ ಆಲಿಂಗನ, ಶುಭಾಶಯ ಕೋರಿಕೆಯೊಂದಿಗೆ ಮಕರ ಸಂಕ್ರಮಣವನ್ನು ಸಂಭ್ರಮ ಸಡಗರದಿಂದ ಪಟ್ಟಣದ ಮಹಾಜನತೆ ಆಚರಿಸಿತು.
ಶ್ರೀಅಲ್ಲಮ ಪ್ರಭು ದೇವಾಲಯದಲ್ಲಿ ಪ್ರಾತಃಕಾಲ ಜಾಗಟೆ, ನಗಾರಿ, ತಾಳ, ಸಂಭಾಳವಾದನದೊಂದಿಗೆ ವಿಶೇಷ ಪೂ ನಡೆಯಿತು. ನಂತರ ಪಟ್ಟಣದಲ್ಲಿ ಹೂಗಳಿಂದ ಅಲಂಕೃತ ಪಾಲಕಿಯಲ್ಲಿ ಶ್ರೀಪ್ರಭುದೇವರ ಉತ್ಸವ, ನಂದಿಕೋಲು ಉತ್ಸವ ವಿಜೃಂಭಣೆಯಿಂದ ಜರುಗಿತು. ಪಾಲಕಿ ನಂದಿಕೋಲು ಬರುವ ದಾರಿಯುದ್ಧಕ್ಕೂ ನೀರು ಹಾಕಿ ರಂಗೋಲಿ ಬಿಡಿಸಿ ಸಿಂಗರಿಸಲಾಗಿತ್ತು. ಪಾಲಕಿ ಉತ್ಸವ ಸಂದರ್ಭದಲ್ಲಿ ದಾರಿಯುದ್ದಕ್ಕೂ ಸದ್ಭಕ್ತರು ನೈವಿದ್ಯೆಯೊಂದಿಗೆ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ನಾಡಗೌಡ ಕುಟುಂಬ ವರ್ಗದವರು, ಸಂಬಾಳ ವಾದನ, ಶ್ರೀಅಲ್ಲಮ ಪ್ರಭು ಝಾಂಝ ಪಥಕದವರು, ಕರಡಿ ಮಜಲಿನ ವಿವಿಧ ಕಲಾವಿಧರು, ಗಾಯನ ಕಲಾವಿದರು, ತಬಲಾ ಕಲಾವಿದಕರು, ಸದ್ಭಕ್ತರು, ದೇವಾಲಯದ ಸಮಸ್ತ ಅರ್ಚಕವೃಂದ ಉತ್ಸವದಲ್ಲಿ ಭಾಗವಹಿಸಿದ್ದರು.
ಶ್ರೀಅಲ್ಲಮ ಪ್ರಭುದೇವರ ದೇವಸ್ಥಾನದಿಂದ ಪ್ರಾರಂಭಗೊಂಡ ಪಾಲಕಿ ಉತ್ಸವ ಸಿದ್ದೇಶ್ವರ ಗಲ್ಲಿ, ಜವಳಿ ಬಜಾರ, ಪೇಠಭಾಗ, ನಡುಚೌಕಿ, ಶ್ರೀಅಲ್ಲಮ ಪ್ರಭುದೇವರ ಅಗಸಿ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಐತಿಹಾಸಿಕ ದೇಸಾರ ಭಾವಿಗೆ ಆಗಮಿಸಿ ಅಲ್ಲಿ ಶ್ರೀಅಲ್ಲಮಪ್ರಭುದೇವರು ವಿರಾಜಮಾನರಾಗುವರು.
ಪುಣ್ಯಸ್ನಾನ : ಇಲ್ಲಿಗೆ ಸಮೀಪದಲ್ಲಿರುವ ಹಳಿಂಗಳಿ ಗುಳ್ಳಿಮಳಿ, ಪಟ್ಟಣದ ಸದ್ಭಕ್ತರು ಕೃಷ್ಣಾ ನದಿಯಲ್ಲಿ ಮಕರ ಸಂಕ್ರಮಣದ ಶುಭ ದಿನದಂದು ಪುಣ್ಯಸ್ನಾನ ಮಾಡಿ ಬಂದರು. ಕೆಲವರು ಕರಿದಿನದಂದು ನದಿಗೆ ತೆರಳಿ ಪುಣ್ಯಸ್ನಾನ ಮಾಡುವರು.

Social Plugin