ಮನೋಹರ ಶಿರೋಳಗೆ ಬಿಜೆಪಿ ಟಿಕೇಟ್ ನೀಡಿ- ನೇಕಾರರ ಆಗ್ರಹ 
ತೇರದಾಳ : ರಾಜ್ಯದಲ್ಲಿಯೇ ನೇಕಾರ ಮತಕ್ಷೇತ್ರ ಎಂದು ಕರೆಯಲ್ಪಡುವ ತೇರದಾಳ ಮತಕ್ಷೇತ್ರಕ್ಕೆ ಈ ಬಾರಿ ಸ್ಥಳೀಯ ನೇಕಾರ ಮುಖಂಡ ಮನೋಹರ ಶಿರೋಳಗೆ ಬಿಜೆಪಿ ಪಕ್ಷದ ಟಿಕೇಟ್ ನೀಡಬೇಕೆಂದು ಪಟ್ಟಣದ ನೇಕಾರರ ಆಗ್ರಹಿಸಿದ್ದಾರೆ. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬ ಸಿದ್ಧಾಂತದೊಂದಿಗೆ ನಾವೆಲ್ಲ ನೇಕಾರರು ಪಕ್ಷ ನಿಷ್ಠರಾಗಿ ಬಿಜೆಪಿ ಬೆಂಬಲಿಸುತ್ತ ಬಂದಿದ್ದು, ರಾಜ್ಯದ ಹಾಗೂ ಜಿಲ್ಲೆಯ ಎಲ್ಲ ನಾಯಕರಿಗೂ ಗೊತ್ತು. ಈ ಹಿಂದೆ ನಾವು ನೇಕಾರರೆಲ್ಲ ಮನೋಹರ ಶಿರೋಳಗೆ ವಿಧಾನ ಪರಿಷತ್‌ಗೆ ಅವಕಾಶ ಮಾಡಿಕೊಡಬೇಕು ಎಂದು ಪಕ್ಷದ ಮುಖಂಡರಲ್ಲಿ ಮನವಿ ಮಾಡಿಕೊಂಡರೂ ಅವಕಾಶ ಮಾಡಿಕೊಡಲಿಲ್ಲ. ಕಡೆಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಬೇಕು ಎಂದು ಸ್ಥಳಿಯ ಶಾಸಕರಲ್ಲಿ ಮತ್ತು ನಾಯಕರಲ್ಲಿ ಕೇಳಿದರೂ ನಮ್ಮ ಬೇಡಿಕೆಗೆ ಮನ್ನನೆ ಸಿಗಲಿಲ್ಲ. 
   ಬಿಜೆಪಿಯಿಂದ ಜಿಲ್ಲೆಯ ನೇಕಾರರಿಗೆ ಏಕೆ ರಾಜಕೀಯ ಸ್ಥಾನಮಾನ ನೀಡುತ್ತಿಲ್ಲ? ನೇಕಾರರೆಲ್ಲ ಬಿಜೆಪಿ ನಿಷ್ಠರಲ್ಲವೇ? ಅಥವಾ ಸಾಮಾಜಿಕ ನ್ಯಾಯ ನಮ್ಮ ಸಮಾಜಕ್ಕೆ ಅನ್ವಯವಾಗುವುದಿಲ್ಲವೇ? ಎಂದು ಜಿಲ್ಲೆಯ ಹಾಗೂ ರಾಜ್ಯದ ನಾಯಕರಿಗೆ ನಮ್ಮ ಪ್ರಶ್ನೆಯಾಗಿದೆ. ಮನೋಹರ ಶಿರೋಳ ಒಬ್ಬ ನೇಕಾರ ಸಮಾಜದವನೆಂಬ ಕಾರಣಕ್ಕೆ ನಾವು ಟಿಕೇಟ್ ಕೇಳುತ್ತಿಲ್ಲ ಅವರು ಕಳೆದ ೨೫ರಿಂದ ೩೦ವರ್ಷಗಳಿಂದ ಭಾಜಪ ನಿಷ್ಠಾವಂತ ಕಾರ್ಯಕರ್ತರಾಗಿ ಜಿಲ್ಲೆ ಹಾಗೂ ರಾಜ್ಯದ ಮುಖಂಡರು ವಹಿಸಿದ ಪಕ್ಷದ ಜಿಲ್ಲೆಯ ಹಾಗೂ ರಾಜ್ಯದ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿ ಪಕ್ಷ ಹಾಗೂ ನೇಕಾರರ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. 
  ಜಿಲ್ಲೆಯ ೭ ಮತಕ್ಷೇತ್ರಗಳಲ್ಲಿ ಬಿಜೆಪಿಯ ಹಿಂದುಳಿದ ವರ್ಗದ ಯಾರಿಗೂ ಇಲ್ಲಿಯವರೆಗೆ ವಿಧಾನ ಸಭಾ ಚುನಾವಣೆಗೆ ಟಿಕೇಟು ನೀಡಿಲ್ಲ ಇದು ಸಾಮಾಜಿಕ ನ್ಯಾಯದ ಪರಿಪಾಲನೆ ಆಗುವುದಿಲ್ಲ. ಜಿಲ್ಲೆಯ ಹಿಂದುಳಿದ ವರ್ಗದ ನೇಕಾರ ಸಮಾಜಕ್ಕೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ರಾಜಕೀಯ ಪ್ರಾತನಿಧ್ಯ ನೀಡುವುದು ಅವಶ್ಯವಾಗಿದೆ. ಆದ್ದರಿಂದ ನೇಕಾರ ಸಮಾಜದ ತಾಳ್ಮೆ ಪರೀಕ್ಷೆ ಮಾಡದೇ ಈ ಬಾರಿ ವಿಧಾನ ಸಭೆ ಚುನಾವಣೆಗೆ ಬಿಜೆಪಿ ಪಕ್ಷದಿಂದ ಮನೋಹರ ಶಿರೋಳಗೆ ಟಿಕೇಟ್ ನೀಡಲೇಬೇಕೆಂದು ಪಕ್ಷದ ಜಿಲ್ಲೆಯ ಹಾಗೂ ರಾಜ್ಯದ ಹಾಗೂ ರಾಷ್ಟ್ರೀಯ ನಾಯಕರಲ್ಲಿ ನಮ್ಮೆಲ್ಲ ನೇಕಾರರ ಆಗ್ರಹವಾಗಿದೆ ಎಂದು ಪಟ್ಟಣದ ನೇಕಾರ ಮುಖಂಡರು ಆಗ್ರಹಿಸಿದ್ದಾರೆ.