ವಾಣಿಜ್ಯ ಮಂಡಳಿಯಿಂದ ಅಕಾಡೆಮಿ ಅಧ್ಯಕ್ಷರಿಗೆ ಸನ್ಮಾನ
        ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಇತ್ತೀಚೆಗಷ್ಟೇ ಸರ್ಕಾರದಿಂದ ನೇಮಕಗೊಂಡ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್‌ಕಶ್ಯಪ್ ಮತ್ತು ರಾಜೋತ್ಸವ ಪ್ರಶಸ್ತಿ ಪಡೆದುಕೊಂಡಿರುವ ಹಿರಿಯ ನಟ ಅವಿನಾಶ್ ಅವರುಗಳನ್ನು ಸನ್ಮಾನಿಸಿದರು. ಗೌರವ ಸ್ವೀಕರಿಸಿದ ಅಧ್ಯಕ್ಷರು ಮಾತನಾಡಿ ಈ ಹಿಂದೆ ಅಕಾಡೆಮಿ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದೆ. ಈಗ ಅಧ್ಯಕ್ಷನಾಗಿ ಹೆಚ್ಚಿನ ಜವಬ್ದಾರಿ ನೀಡಿದ್ದಾರೆ. ಚಿತ್ರರಂಗಕ್ಕೆ ಹೊಸತನ ಕೊಡಬೇಕೆಂಬ ಗುರಿ ಇದೆ. ಅದಕ್ಕೂ ಮೊದಲು ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ತಯಾರಿ ನಡೆಸಬೇಕಾಗಿದೆ. ಅದಕ್ಕೆ ಮೊದಲು ಪ್ರಾಶ್ಯಸ್ತ್ಯ ಕೊಡಬೇಕಾಗಿದೆ. ತದನಂತರದಲ್ಲಿ ವರ್ಕ್‌ಶಾಪ್, ಮ್ಯೂಸಿಯಂ ಮುಂತಾದವುಗಳ ಕೆಲಸ ಆಗಬೇಕಾಗಿದೆ. ಹಿರಿಯ ಛಾಯಾಗ್ರಾಹಕ ವಿ.ಕೆ.ಮೂರ್ತಿ ಅವರ 100ನೇ ವರ್ಷದ ಹುಟ್ಟುಹಬ್ಬಕ್ಕೆ ಇವರ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲು ಯೋಜನೆ ಹಾಕಲಾಗಿದೆ. ಇದಕ್ಕೆ ವಾಣಿಜ್ಯ ಮಂಡಳಿ ಬೆಂಬಲವಿದೆ ಎಂದರು.
       ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ಉಳಿದುಕೊಂಡಿದ್ದೇನೆ ಎಂದರೆ ಅದಕ್ಕೆ ನಿರ್ಮಾಪಕರು ಕಾರಣರಾಗಿರುತ್ತಾರೆ. ಜತೆಗೆ ಮಾದ್ಯಮ ಮಿತ್ರರು ಸಹಕಾರ ನೀಡಿದ್ದಾರೆ. ಇದೆಲ್ಲಾ ಕಾರಣದಿಂದ ರಾಜೋತ್ಸವ ಪ್ರಶಸ್ತಿ ಲಭಿಸಿದೆ ಅಂತ ಅವಿನಾಶ್ ಖುಷಿ ಹಂಚಿಕೊಂಡರು.
      ಸಮಾರಂಭದಲ್ಲಿ ಅಧ್ಯಕ್ಷರಾದ ಬಾ.ಮ.ಹರೀಶ್, ಮಾಜಿ ಅಧ್ಯಕ್ಷರುಗಳಾದ ಎಸ್.ಎ.ಚಿನ್ನೆಗೌಡ, ಥಾಮಸ್‌ಡಿಸೋಜ, ಬಸಂತ್‌ಕುಮಾರ್‌ಪಾಟೀಲ್, ಪದಾದಿಕಾರಿ ಸುಂದರ್‌ರಾಜ್, ಹಿರಿಯ ಛಾಯಾಗ್ರಾಹಕ ಬಸವರಾಜು ಮುಂತಾದವರು ಉಪಸ್ತಿತರಿದ್ದರು.