ಇದು ಮಾತು ಮೌನವಾಗುವ ಹೊತ್ತು!
ಲೇಖನ : ಶ್ರೀ ಗಣೇಶ ಕಾಸರಗೋಡು ಹಿರಿಯ ಸಿನಿಮಾ ಪತ್ರಕರ್ತರು 
 'ಕಾಂತಾರ' ಸಿನಿಮಾದ ಅಭೂತಪೂರ್ವ ಯಶಸ್ಸಿನ ನಂತರ ಮೌನಕ್ಕೆ ಜಾರಲಿರುವ ರಿಷಬ್ ಶೆಟ್ಟಿ! 
     ಒಮ್ಮೆ ಸದಾಶಿವನಗರದ ಮನೆಯಲ್ಲಿ ಭೇಟಿಯಾದಾಗ ನಾನು ಪುನೀತ್ ರಾಜಕುಮಾರ್ ಅವರಲ್ಲಿ ಪ್ರಶ್ನಿಸಿದ್ದೆ : 'ಅಪ್ಪೂ, ಇಷ್ಟೊಂದು ದೊಡ್ಡ ಖ್ಯಾತಿಯನ್ನು ನೀವು ಹೇಗೆ ಸಹಿಸಿಕೊಂಡಿದ್ದೀರಿ?' - ಪ್ರಶ್ನೆ ಕೇಳಿ ನಕ್ಕರು ಪುನೀತ್. ಪ್ರಶ್ನೆಯ ಆಂತರ್ಯ ಅವರಿಗೆ ಅರ್ಥವಾಗಿತ್ತು. ಅವರು ಉತ್ತರಿಸಿದ್ದರು : 'ಯಶಸ್ಸು ಮತ್ತು ಅಪಯಶಸ್ಸು ನಮ್ಮ ಕೈಲಿಲ್ಲ. ಇವೆಲ್ಲವೂ ಪ್ರೇಕ್ಷಕ ಪ್ರಭುಗಳು ಕೊಡುವ ಭಿಕ್ಷೆ! ನಾವು ಎರಡನ್ನೂ ಅನುಭವಿಸಲು ಸಿದ್ಧರಿರಬೇಕು ಅಷ್ಟೇ. ಯಶಸ್ಸಿಗೆ ಹಿಗ್ಗದೇ, ಅಪಯಶಸ್ಸಿಗೆ ಕುಗ್ಗದೇ ಮುಂದುವರಿಲೇ ಬೇಕು. ಈ ಎರಡನ್ನೂ ಸಹಿಸಿಕೊಳ್ಳಲೇ ಬೇಕು...' - ಪುನೀತ್ ಅವರ ಈ ಪ್ರೌಢ ವಿಶ್ಲೇಷಣೆ ಕೇಳಿ ಅಚ್ಚರಿಗೊಂಡಿದ್ದೆ ನಾನು...
     ಇದೇ ಪ್ರಶ್ನೆಯನ್ನು ಮೊನ್ನೆ ನಾನು ರಿಷಬ್ ಶೆಟ್ಟಿಗೂ ಕೇಳಿದ್ದೆ. ಆಗ ಅವರ ತಂಡ 'ಕಾಂತಾರ' ಸಿನಿಮಾದ ಯಶಸ್ಸನ್ನು ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಲು ದಕ್ಷಿಣ ಕನ್ನಡ ಪ್ರವಾಸದಲ್ಲಿದ್ದರು. ಪ್ರಾಯಶಃ ಮಂಗಳೂರಿನ 'ಪಿಲಿಪರ್ಬ'ದಲ್ಲಿ ಪಾಲ್ಗೊಂಡಿರುವಾಗಲೇ ನಾನೊಂದು ಮೆಸೇಜ್ ಫಾರ್ವರ್ಡ್ ಮಾಡಿದೆ : 'ಏನು ಹೇಳೋದು ರಿಷಬ್? ಮಾತು ಮೌನವಾಗಿದೆ! ಅನಾರೋಗ್ಯದ ನಿಮಿತ್ತ 'ಕಾಂತಾರ' ಸಿನಿಮಾವನ್ನು ಇನ್ನೂ ನೋಡಿಲ್ಲ. ಶನಿವಾರ ವ್ಯವಸ್ಥೆ ಮಾಡಲು PRO ವೆಂಕಟೇಶ್'ಗೆ ಹೇಳಿದ್ದೇನೆ. ನೋಡುವ ಮೊದಲೇ ಕ್ಲೀನ್ ಬೌಲ್ಡ್ ಆಗಿದ್ದೇನೆ! ಕನ್ನಡ ಚಿತ್ರರಂಗದ ಚರಿತ್ರೆಯಲ್ಲಿ ನಿಮ್ಮ ಶ್ರಮ ದಾಖಲಿಸುವಂಥಾದ್ದು. ಸಿನಿಮಾ ನೋಡಿದವರೆಲ್ಲ ಫೇಸ್ ಬುಕ್'ನಲ್ಲಿ ವಿಮರ್ಶೆ ಬರೆಯುತ್ತಿರುವುದನ್ನು ಕಂಡು ಪುಳಕಿತನಾಗಿದ್ದೇನೆ. ಕನ್ನಡ ಚಿತ್ರರಂಗದಲ್ಲಿ ಇದು ಪ್ರಥಮ. ಒಂದು ಪ್ರಶ್ನೆ : ಈ ಅಭೂತಪೂರ್ವ ಯಶಸ್ಸನ್ನು ಹೇಗೆ ಸಹಿಸಿಕೊಂಡಿದ್ದೀರಿ ರಿಷಬ್?'
     - ಮೆಸೇಜ್ ಮಾಡಿ ನಿಮಿಷವಾಗಿಲ್ಲ, ರಿಷಬ್ ವಾಯ್ಸ್ ಮೆಸೇಜ್ ಮೂಲಕ ಉತ್ತರಿಸಿದ್ದರು : 'ಥ್ಯಾಂಕ್ಯೂ ಸೋ ಮಚ್ ಅಣ್ಣಾ...ನಿಮ್ಮ ಆರೋಗ್ಯದ ಮೇಲೆ ಗಮನವಿರಲಿ, ಬೇಗ ಹುಷಾರಾಗಿ. ಇನ್ನು ನಿಮ್ಮ ಪ್ರಶ್ನೆಗೆ ಉತ್ತರ : 'ಕಾಂತಾರ' ಸಿನಿಮಾದ ಈ ಅಭೂತಪೂರ್ವ ಯಶಸ್ಸನ್ನು ಹೇಗೆ ಸಹಿಸಿಕೊಂಡಿದ್ದೇನೆ ಅಂದ್ರೆ, ಮೌನಕ್ಕೆ ಶರಣಾಗಿದ್ದೇನೆ ಅಣ್ಣಾ, ಅಷ್ಟೇ...ಹ್ಹ ಹ್ಹ ಹ್ಹ...ಯಾವತ್ತೂ ಗೆಲುವು ಮತ್ತು ಸೋಲು ನಮ್ಮಂಥವರ ಬದುಕಿನಲ್ಲಿ ಪರ್ಮನೆಂಟಲ್ಲ! ಇದನ್ನೆಲ್ಲಾ ಕೊಡುವವರು ಪ್ರೇಕ್ಷಕಪ್ರಭುಗಳು. ಈ ಯಶಸ್ಸಿನಿಂದಾಗಿ ಅವರ ಋಣ ಇನ್ನಷ್ಟು ಹೆಚ್ಚಾಗಿದೆ. ಮುಂದೇನು ಎನ್ನುವ ಪ್ರಶ್ನೆ ಪೆಡಂಭೂತವಾಗಿ ಕಾಡಲು ಶುರುವಾಗಿದೆ! ಆದ್ರೆ ಒಂದಂತೂ ನಿಜ : ಇನ್ನು ಮುಂದೆ ಇದಕ್ಕಿಂತಲೂ ಹೆಚ್ಚಿನದ್ದೇನನ್ನು ಮಾಡಲು ಸಾಧ್ಯ ಎನ್ನುವುದನ್ನಷ್ಟೇ ಯೋಚಿಸಲು ಆರಂಭಿಸಿದ್ದೇನೆ. ಸದ್ಯಕ್ಕೆ ಪ್ರೇಕ್ಷಕ ಮಹಾಪ್ರಭುವಿನ ಋಣ ತೀರಿಸಲೆಂದು ಪ್ರವಾಸ ಹೊರಟಿದ್ದೇನೆ. ಇದಾದ ಮೇಲೆ ಸ್ವಲ್ಪ ದಿನ ಸುಮ್ಮನಿರೋಣ ಅಂತಿದ್ದೇನೆ, ಮೌನಕ್ಕೆ ಶರಣಾಗಿ ಮುಂದಿನ ತಪಸ್ಸಿಗೆ ಹೊರಡಬೇಕು...' - ರಿಷಬ್ ಶೆಟ್ರ ಈ ವಿವರಣೆ ಕೇಳಿ ಆಶ್ಚರ್ಯವಾದದ್ದು ನಿಜ. ಯಾಕಂದ್ರೆ, ಆ ದಿನ ಪುನೀತ್ ಕೊಟ್ಟ ಉತ್ತರಕ್ಕೂ ಈ ದಿನ ರಿಷಬ್ ಕೊಟ್ಟಿರುವ ಉತ್ತರಕ್ಕೂ ಸಾಮ್ಯತೆಯಿದೆ ಅಲ್ಲವೇ?