'ಶಿವಪ್ಪಾ ಕಾಯೋ ತಂದೇ' - ಎಂಬ ಹಸಿವಿನ ಗೀತೆಯನ್ನು 'ಬೇಡರ ಕಣ್ಣಪ್ಪ' ಚಿತ್ರಕ್ಕಾಗಿ ಬರೆದ ನಂಜು ಕವಿ ಸತ್ತದ್ದೂ ಹಸಿವಿನಿಂದಲೇ! ಎಂಥಾ ವಿಪರ್ಯಾಸವಲ್ಲವೇ? ಹೌದು, ಕನ್ನಡ ಚಿತ್ರರಂಗದ ಇತಿಹಾಸದ ಗರ್ಭದಲ್ಲಿ ಅಡಗಿ ಹೋದ ಈ ದುರಂತ ಕಥೆಯ ಹೀರೋನ ನಿಜವಾದ ಹೆಸರು : ಆನೇಕಲ್ ಎಸ್.ನಂಜಪ್ಪ.
ಈ ಗೀತೆರಚನಕಾರ ಸಂಭಾವನೆಗಾಗಿ ಎಂದೂ ನಿರ್ಮಾಪಕರ ಜುಟ್ಟು ಹಿಡಿದವರಲ್ಲ. ಊಟ ಕೊಟ್ಟರೆ ಉಂಟು, ಇಲ್ಲವಾದರೆ ಇಲ್ಲ. ಇಷ್ಟರಲ್ಲೇ ಬದುಕನ್ನು ರೂಪಿಸಿಕೊಂಡಿದ್ದ ನಂಜಪ್ಪನವರು ಅವಕಾಶ ಸಿಕ್ಕರೆ ಸಾಕೆಂದು ಕಾದು ಕುಳಿತವರೂ ಅಲ್ಲ. ಆ ಕಾಲದಲ್ಲಿ ಕೈ ತುಂಬಾ ಅವಕಾಶಗಳೇನೋ ಸಿಕ್ಕವು. ಆದರೆ ಜೇಬು ತುಂಬಾ ದುಡ್ಡು ಸಿಗಲಿಲ್ಲ. ಹೀಗಾಗಿಯೇ ನಂಜಪ್ಪನವರು ಅಕ್ಷರಶಃ ಹಸಿವಿನಿಂದಲೇ ಕಾಲವಾದರು ಎನ್ನುವ ಘನಘೋರ ಸತ್ಯ ಚಿತ್ರರಂಗದ ಇತಿಹಾಸ ಸೇರಿಕೊಂಡು ಬಿಟ್ಟಿದೆ!
ವರನಟ ಡಾ|ರಾಜಕುಮಾರ್ ನಟನೆಯ ' ಬೇಡರ ಕಣ್ಣಪ್ಪ' ಚಿತ್ರ ಯಾರಿಗೆ ಗೊತ್ತಿಲ್ಲ? 1954ರಲ್ಲಿ ತೆರೆ ಕಂಡ ಈ ಚಿತ್ರದ 'ಶಿವಪ್ಪಾ ಕಾಯೋ ತಂದೇ ಮೂರುಲೋಕ ಸ್ವಾಮಿದೇವಾ' ಹಾಡು ಇಂದಿಗೂ ಅಣ್ಣಾವ್ರಷ್ಟೇ ಜನಪ್ರಿಯ! ಆದರೆ ಸದಾ ಕಾಲಕ್ಕೂ ಸಲ್ಲುವ ಈ 'ಹಸಿವಿನ ಗೀತೆ'ಯನ್ನು ಬರೆದ ಲಾವಣಿ ನಂಜಪ್ಪ ಉರುಫ್ ನಂಜುಕವಿ ಬಗ್ಗೆ ನಮ್ಮ ಬಹಷ್ಟು ಮಂದಿಗೆ ಗೊತ್ತಿಲ್ಲ. ನಂಜಪ್ಪ ಹುಟ್ಟಿದ್ದು ಆನೇಕಲ್'ನಲ್ಲಿ, 1891ರ ಮಾರ್ಚ್ 22ರಂದು. ಲಾವಣಿ ಕಟ್ಟಿ ಹಾಡುವುದರಲ್ಲಿ ನಿಷ್ಣಾತರಾದ ನಂಜಪ್ಪ ಕವಿಯೂ ಹೌದು, ಗಾಯಕರೂ ಹೌದು. ಲಾವಣಿಗಳ ಮೂಲಕ ಜನಪ್ರಿಯರಾಗಿದ್ದ ನಂಜಪ್ಪ ಅವರನ್ನು ಸಹಜವಾಗಿಯೇ ನಾಟಕರಂಗ ಸೆಳೆಯಿತು. ಗುಬ್ಬಿ ಕಂಪೆನಿಯಲ್ಲಿ ಹಾಡುಗಳನ್ನು ಬರೆಯುತ್ತಿದ್ದ ನಂಜಪ್ಪನವರಿಗೆ 'ಬೇಡರ ಕಣ್ಣಪ್ಪ' ಚಿತ್ರಕ್ಕೆ ಹಾಡುಗಳನ್ನು ಬರೆಯುವ ಅವಕಾಶ ಸಿಕ್ಕಿತು. ಒಟ್ಟು ಆರು ಹಾಡುಗಳನ್ನು ಬರೆದ ನಂಜಪ್ಪನವರು ದೃಶ್ಯವೊಂದರಲ್ಲಿ ಮೊಲಗಳ ವ್ಯಾಪಾರಿಯಾಗಿ ರಾಜಕುಮಾರ್ ಅವರೊಂದಿಗೆ ನಟಿಸಿದ್ದಾರೆ ಕೂಡಾ! ನಂತರದ ದಿನಗಳಲ್ಲಿ ಹತ್ತಾರು ಚಿತ್ರಗಳಿಗೆ ಐವತ್ತಕ್ಕೂ ಹೆಚ್ಚು ಗೀತೆಗಳನ್ನು ಬರೆದರೂ ಅದೇಕೋ ತೆರೆಮರೆಯಲ್ಲೇ ಉಳಿದು ಬಿಟ್ಟರು...ಆದರೇನಂತೆ? ಇವರು ಬರೆದ ಹಾಡು ಇಂದಿಗೂ ಲೋಕಪ್ರಿಯ!
ಅಂದಹಾಗೆ, ಈ ಲಾವಣಿ ನಂಜಪ್ಪನವರ ಪತ್ನಿ ಶಾರದಮ್ಮ ಗುಟುಕು ಜೀವ ಹಿಡಿದುಕೊಂಡು ಇನ್ನೂ ಬದುಕಿದ್ದಾರೆ. ಎಚ್.ಆರ್.ಎಸ್.ಲೇಔಟ್'ನಲ್ಲೊಂದು ನಂದಿನಿ ಹಾಲಿನ ಬೂತ್ ಇಟ್ಟುಕೊಂಡು ಬದುಕು ನಡೆಸಿದ್ದಾರೆ. ಈ ಹಾಲಿನ ಬೂತ್ ಹಿನ್ನೆಲೆಯಲ್ಲೊಂದು ಕಥೆಯಿದೆ : ಸಂಪಾದನೆಯ ಎಲ್ಲಾ ದಾರಿಗಳು ಮುಚ್ಚಿ ಬದುಕುವುದೇ ಕಷ್ಟವಾದಾಗ ಶಾರದಮ್ಮ ನೇರವಾಗಿ ವಿಧಾನಸೌಧಕ್ಕೆ ಹೋಗಿ ತಮ್ಮ ಅಳಲನ್ನು ತೋಡಿಕೊಂಡದ್ದು ಆಗಿನ ಮುಖ್ಯಮಂತ್ರಿಗಳಾಗಿದ್ದ ಇದೇ ಯಡಿಯೂರಪ್ಪನವರ ಬಳಿ. ಯಡಿಯೂರಪ್ಪನವರು ತಕ್ಷಣವೇ ತಥಾಸ್ತು ಅಂದದ್ದು ಈ ನಂದಿನಿ ಹಾಲಿನ ಬೂತ್'ಗೆ! ಈಗಲೂ ಅಂಗಡಿಯ ಬಾಗಿಲು ತೆರೆಯುವಾಗ ಶಾರದಮ್ಮ ಈ ಸಹೃದಯೀ ಮುಖ್ಯಮಂತ್ರಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ : ವಿಜಯೀ ಭಾವ, ಆಯುಷ್ಮಾನ್ ಭವ...
◆ ಓಂ ಶ್ರೀ ಗಣೇಶಾಯ ನಮಃ ◆

Social Plugin