ಈ ಪೋಸ್ಟಿಗೆ ಸ್ವಲ್ಪ ಹಿಂದಿನಿಂದ ಬರೋಣ... 
ಕೆಲವು ದಿನಗಳ ಹಿಂದೆ ಹಿಂದಿ ದಿವಸನಾ ವಿರೋಧಿಸಿ Facebook ನಲ್ಲಿ ಹಿಗ್ಗಾಮುಗ್ಗಾ ಪೋಸ್ಟಗಳು ಹುಟ್ಟಕೊಂಡಿದ್ವು. ಅಂತಹ ಪೋಸ್ಟಗಳನ್ನ ನೀವು ಹಾಕಿ, ಬೇರೆ ಹಿಂದಿ ವಿರೋಧಿ ಪೋಸ್ಟಗಳನ್ನ ಸಮರ್ಥಿಸಿ, ಮಲಾಯಾಳಂ, ತೆಲಗು, ತಮಿಳು, ಫಾರಿನ್ ಭಾಷೆಗಳ ಚಿತ್ರ ಹಾಗೂ ಸಿರೀಸ್ ಗಳನ್ನ ಹೊಗಳಿ ಪೋಸ್ಟ್ ಹಾಕಿ, ನೀವು ಈ ಸಿನಿಮಾ ಫಸ್ಟ್ ಶೋ ನೋಡೊಕೆ ಹೋಗಿಲ್ಲ ಅಂದ್ರೆ ಕನ್ನಡಕ್ಕೆ ಹಿಂದಿಯಿಂದ ಅಥವಾ ಬೇರೆ ಭಾಷೆಯಿಂದ ಅಲ್ಲ ನಿಮ್ಮಂತವರಿಂದ ತೊಂದ್ರೆ ಇದೆ ಅಂತ ಅರ್ಥ. 

ಈಗ ಮುಂದೆ ಹೋಗೋಣ... 

ಪುಕ್ಸಟ್ಟೆ ಲೈಫು ನೋಡಿಕೊಂಡು ಹೊರಗೆ ಬರಬೇಕಾದ್ರೆ ಏನೋ ಒಂತರ ಸಂಕಟ ಮನಸ್ಸನ್ನ ಆವರಿಸಿಕೊಂಡ ಬಿಟ್ತು. ಸಿನಿಮಾ ನೋಡೊವಾಗ ಸಂಚಾರಿ ವಿಜಯ ನಮ್ಮ ಜೊತೆ ಇಲ್ಲ ಅನ್ನೊದೆ ಮರೆತು ಹೋಗಿದ್ದೆ. ಸಿನಿಮಾ ನೋಡಿ ಹೊರಗೆ ಬಂದ ಮೇಲೆ ನನಗೆ ಅದು ಫ್ಲ್ಯಾಶ್ ಆಗಿದ್ದು. ಸಿನಿಮಾದ ಕತೆಯಲ್ಲಿ ಅಷ್ಟು ಸುಲಲಿತವಾಗಿ ಅವರು ಬೆರೆತು ಹೋಗಿದ್ದಾರೆ. ಬಹುಶಃ ಅವರ ಸಿನಿಮಾ ಕೇರಿಯರ್ ನಲ್ಲಿ ಇದು ಅವರ ಬೆಸ್ಟ್ ನಟನೆಯಲ್ಲಿ ಒಂದು ಎಂದರೆ ತಪ್ಪಾಗಲಾರದು. 

ಸಿನಿಮಾ ಕತೆ ನಾವು ನೀವು ಉಹಿಸದಿರುವ ಎಳೆ ಹೊಂದಿದೆ. ಸಂಪೂರ್ಣ ಕತೆ ಒಂದು ರೋಚಕತೆಯ ಎಳೆ ಮೇಲೆ ಸಾಗಿದರೂ ಅಲ್ಲಲ್ಲಿ ಪರಿಸ್ಥಿತಿಗೆ ಸಿಕ್ಕಿ ಹಾಕಿಕೊಂಡು ಒದ್ದಾಡುವ ಸಂಚಾರಿ ವಿಜಯವರ ಪಾತ್ರ ನಮ್ಮ ಮನಸ್ಸನ್ನ ಕದಡುತ್ತದೆ. ಒಂದಷ್ಟು ನಗು, ಸ್ವಲ್ಪ ಆಶ್ಚರ್ಯ, ಒಂದೆರಡು ತಿರುವುಗಳು ನೋಡುಗರ ಕುತೂಹಲವನ್ನ ಕೊನೆಯವರೆಗೂ ಹಿಡಿದಿಟ್ಟುಕೊಳ್ಳುತ್ತದೆ. ಅಚ್ಯುತ್ ಕುಮಾರ, ಮಾತಂಗಿ ಪ್ರಸನ್ನ, ಅರವಿಂದ ಕುಪ್ಳಿಕರ್, ಕಿರಣ್ ಕುಮಾರ್, ಅವರುಗಳ ನಟನೆ ಮನಸ್ಸಿಗೆ ತೃಪ್ತಿ ಆಗುವಷ್ಟು ರಸಗಳನ್ನ ಬಡಿಸುತ್ತದೆ. ವಿಶೇಷವಾಗಿ ರಂಗಾಯಣ ರಘು ಅವರ ಪಾತ್ರ ಅವರ ನಿರ್ವಹಣೆ ಬೇರೆ ಮಸಾಲೆ ಚಿತ್ರಗಳ ಪಾತ್ರಕ್ಕಿಂತ ಮುದ ನೀಡುತ್ತದೆ. 

ವಾಸು ದೀಕ್ಷಿತ್ ರವರ ಎರಡು ಹಾಡುಗಳು ಸಾಂದರ್ಭಿಕವಾಗಿ ಮೂಡಿ ಬಂದಿರುವುದಷ್ಟೆ ಅಲ್ಲ ಸಾಕಷ್ಟು ದಿನಗಳ ಕಾಲ ನೆನಪಿನಲ್ಲಿ ಉಳಿಯುವ ಗುಣವನ್ನು ಹೊಂದಿವೆ. ಅದ್ವೈತ ಗುರುಮೂರ್ತಿ ಕ್ಯಾಮರ ಚಲನವಲನ ಕತೆಯ ಎಲ್ಲ ಮಜಲುಗಳನ್ನ ಚೆನ್ನಾಗಿ ಸೆರೆ ಹಿಡಿದಿದೆ. 

ಸಿನಿಮಾ ಅಲ್ಲಿ ಇಲ್ಲಿ ಕೊಂಚ ನಿಧಾನ ಗತಿಯಲ್ಲಿ ಸಾಗಿದರೂ ಅರವಿಂದ ಅವರ ನಿರ್ದೇಶನ ಜನರ ಮನಸ್ಸನ್ನ ಗೆಲ್ಲುವುದರಲ್ಲಿ ಸಂಶಯವಿಲ್ಲ. ಅದರಲ್ಲೂ ಚಿತ್ರದ ಅಂತ್ಯವನ್ನ ಚಿತ್ರಿಸಿದ ಪರಿ ಬಹಳ ದಿನಗಳವರೆಗೆ ನೆನಪಿನಲ್ಲಿ ಉಳಿಯುವುದಂತೂ ನಿಜ. ಮುಂದೆ ಅರವಿಂದರಿಂದ ಸಾಕಷ್ಟು ನಿರೀಕ್ಷಿಸ ಬಹುದು. 

ತಪ್ಪದೆ ಬಿಡುವು ಮಾಡಿಕೊಂಡು ಚಿತ್ರವನ್ನ ನೋಡಿ. ಈ ಸಂದರ್ಭದಲ್ಲಿ ಇಂತಹ ಚಿತ್ರಗಳಿಗೆ ನಿಮ್ಮ ಸಹಕಾರದ ಅಗತ್ಯವಿದೆ. 

ಶುಭವಾಗಲಿ. 

🙏🙏🙏

ವಿಸೂ: ಚಿತ್ರದ ಹೆಸರಿನಲ್ಲಿ ಪುಕ್ಸಟ್ಟೆ ಇದೆ ಅಂತ ಟಾಕೀಸಿಗೆ ಖಾಲಿ ಕೈಲಿ ಹೋಗದೆ ದುಡ್ಡು ತೆಗೆದುಕೊಂಡು ಹೋಗಿ. ಅದರ ಅವಶ್ಯಕತೆಯೂ ಸಿನಿಮಾಗಳಿಗೆ ಇದೆ.