● ಪ್ರೀತಿಯ ಶಿವಣ್ಣನ ಹುಟ್ಟು ಹಬ್ಬದಂದು ಫ್ಲಾಶ್ ಬ್ಯಾಕಿಗೊಂದು ಸುತ್ತು : ಅಲ್ಲಿಂದ ಇಲ್ಲಿ ತನಕ...●
◆ 'ಆನಂದ್' ಸಿನಿಮಾದ ಮುಹೂರ್ತ ಸಮಾರಂಭ ಬೆಂಗಳೂರಿನ 'ಚಾಮುಂಡೇಶ್ವರಿ ಸ್ಟುಡಿಯೋ'ದಲ್ಲಿ ನಡೆದಿದ್ದಾಗ ಅಲ್ಲಿ ನಾನೂ ಹಾಜರಿದ್ದೆ. ಶಿವರಾಜಕುಮಾರ್ ಚೊಚ್ಚಲ ಚಿತ್ರ ಎನ್ನುವ ಸಂಭ್ರಮ ಒಂದೆಡೆಯಾದರೆ, ಸಿನಿಮಾದ ಭವಿಷ್ಯ ಏನಾಗುವುದೋ ಎನ್ನುವ ಆತಂಕ ಮತ್ತೊಂದೆಡೆ. ಈ ಆತಂಕ ರಾಜಕುಮಾರ್, ಪಾರ್ವತಮ್ಮನವರನ್ನೂ ಹೊರತು ಪಡಿಸಿರಲಿಲ್ಲ. ನಿರ್ದೇಶಕರಾಗಿ ಪ್ರೂವ್ ಮಾಡಿಕೊಂಡಿದ್ದರೂ ಸಿಂಗೀತಂ ಶ್ರೀನಿವಾಸರಾವ್ ಅವರು ಕೂಡಾ ಟೆನ್ಷನ್'ನಲ್ಲಿದ್ದರು. ಉಳಿದಂತೆ ಚಿ|ಉದಯಶಂಕರ್ ಸ್ವಲ್ಪ ಮಟ್ಟಿಗೆ ನಿರಾಳವಾಗಿದ್ದರು. ಶಿವರಾಜಕುಮಾರ್'ರಂತೂ ಏನೋ ಒಂದು ಹಬ್ಬದಲ್ಲಿ ಪಾಲ್ಗೊಳ್ಳುವ ಮಗುವಿನಂತೆ ಓಡಾಡಿಕೊಂಡಿದ್ದರು. ನಾಯಕಿ ಸುಧಾರಾಣಿಯವರ ಮುಗ್ಧತೆ ಎದ್ದು ಕಾಣಿಸುತ್ತಿತ್ತು. ಎಲ್ಲರಿಗೂ ಇದ್ದ ಒಂದೇ ಒಂದು ಕಾನ್'ಫಿಡೆನ್ಸ್ ಅಂದರೆ ಅದು ಗಟ್ಟಿ ಕಥೆಯ ಮೇಲಿದ್ದ ನಂಬಿಕೆ! ಹೌದು, ಆಗ ಕಥೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದವರೆಂದರೆ ರಾಜಕುಮಾರ್, ಸೋದರ ವರದರಾಜ್, ಪಾರ್ವತಮ್ಮ, ಚಿ|ಉದಯಶಂಕರ್. ಈ ನಾಲ್ವರಿಗೆ ಏಕರೀತಿಯಲ್ಲಿ ಕಥೆ ಒಪ್ಪಿಗೆಯಾದರೆ ಮಾತ್ರ ಆ ಸಿನಿಮಾ ಸೆಟ್ಟೇರುತ್ತಿತ್ತು. ಹೀಗೆ ಒಪ್ಪಿಗೆಯಾದ ಕಥೆಯೇ 'ಆನಂದ್' ಸಿನಿಮಾ...
ಅದರಲ್ಲೂ ವರದಪ್ಪಣ್ಣ ಕಥೆಯ ಆಯ್ಕೆ ವಿಚಾರದಲ್ಲಿ ಭಯಂಕರ ಸ್ಟ್ರಿಕ್ಟ್. ಇಷ್ಟವಾಗದ ಕಥೆಯನ್ನು ಸುತರಾಂ ಒಪ್ಪದ ವರದಪ್ಪಣ್ಣ ಕಠೋರ ನಿಲುವಿನ ವ್ಯಕ್ತಿ. ತಮಗೆ ಕಥೆ ಇಷ್ಟವಾಗದೇ ಉಳಿದವರಿಗೆ ಇಷ್ಟವಾಗಿದೆ ಎಂಬ ಸಣ್ಣ ಸುಳಿವೂ ಸಿಕ್ಕರೂ ಸಾಕು ಜಾಗ ಖಾಲಿ ಮಾಡಿ ಬಿಡುತ್ತಿದ್ದರು! ಯಾವ ಕಥೆ ವರದಪ್ಪಣ್ಣನಿಗೆ ಇಷ್ಟವಾಗಿರುವುದಿಲ್ಲವೋ ಆ ಕಥೆಯ ಚಿತ್ರ 99% ಸೋತಿರುತ್ತದೆ! ಇದರ ಅರ್ಥ ವರದಪ್ಪಣ್ಣ ಆಯ್ಕೆ ಮಾಡಿಕೊಂಡ ಕಥೆಗಳೆಲ್ಲವೂ ಗೆದ್ದಿವೆ ಎಂದಲ್ಲ. ಆದರೆ ಬಹುತೇಕ ಚಿತ್ರಗಳು ಹಿಟ್ ಆಗಿವೆ ಮತ್ತು ಕೆಲವು ಸೂಪರ್ ಹಿಟ್ ಆಗಿವೆ. ವರದಪ್ಪಣ್ಣ ಕಥೆಯನ್ನು ಆಯ್ಕೆ ಮಾಡಿಕೊಂಡ ಮೇಲೆ ಉಳಿದ ಕೆಲಸ ಉದಯಶಂಕರ್'ಗೆ ಸೇರಿದ್ದು. ಆ ಕಥೆಗೆ ಏನೇನು ಮಸಾಲೆ ಬೇಕೋ ಅವೆಲ್ಲವನ್ನೂ ಅರೆದು ಸೇರಿಸುವ ಕೆಲಸ ಸಾಮಾನ್ಯದ್ದಲ್ಲ. ಕತೆಗೊಂದು ರೂಪು ಕೊಟ್ಟು ಅದನ್ನು ಪ್ರೇಕ್ಷಕರ ಮುಂದೆ ತರುವ ಗುರುತರ ಜವಾಬ್ದಾರಿ ಚಿತ್ರಕಥೆ, ಗೀತರಚನೆಯದ್ದು. ಇವೆರಡರಲ್ಲೂ ಉದಯಶಂಕರ್ ಎಕ್ಸ್ಪರ್ಟ್...
■
ಇವೆಲ್ಲಾ ಹಳೆಯ ಕಥೆ, ಹೊಸ ಕಥೆ ಏನಪ್ಪಾ ಅಂದರೆ...ಈಗ ರಾಜಕುಮಾರ್ ಇಲ್ಲ, ಪಾರ್ವತಮ್ಮ ಇಲ್ಲ, ವರದಪ್ಪಣ್ಣನೂ ಇಲ್ಲ, ಉದಯಶಂಕರ್ ಕೂಡಾ ಇಲ್ಲ. ಈ ಇಲ್ಲಗಳ ನಡುವೆ ಸಿಕ್ಕಿಹಾಕಿಕೊಂಡು ಅಪ್ಪಚ್ಚಿಯಾಗಿರುವ ರಾಘವೇಂದ್ರ ರಾಜಕುಮಾರ್ ತಮ್ಮ ಪುತ್ರ ವಿನಯ್ ರಾಜಕುಮಾರ್ ಚಿತ್ರಗಳಿಗೆ ಸಮರ್ಥ ಕಥೆ ಆಯ್ಕೆ ಮಾಡಿಕೊಳ್ಳುವುದರಲ್ಲೇ ಕಳೆದು ಹೋಗಿದ್ದಾರೆ! ಹೀಗಾಗಿ ಶಿವರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಅವರ ಚಿತ್ರಗಳಿಗೆ ಸಂಬಂಧಿಸಿದ ಕಥೆಗಳ ಆಯ್ಕೆಯನ್ನು ಅವರವರೇ ಮಾಡಿಕೊಳ್ಳಬೇಕಾಗಿದೆ!
ಅದರಲ್ಲೂ ಶಿವಣ್ಣ ಅವರಂತೂ ಈಗೀಗ ಕಥೆಯ ಆಯ್ಕೆಯಲ್ಲಿ ಎಕ್ಸ್ಪರ್ಟ್ ಆಗಿಬಿಟ್ಟಿದ್ದಾರೆ! ತಮ್ಮ ಚಿತ್ರಗಳ ಕಥೆಯನ್ನು ತಾವೇ ಆಯ್ಕೆ ಮಾಡಿಕೊಳ್ಳುವ ಶಿವಣ್ಣ ಆಯ್ಕೆಗೂ ಮೊದಲು ಮಾಡುವ ಕೆಲಸವೆಂದರೆ, ಕೇಳಬಹುದಾದ ಕಥೆಯ ನಿರ್ದೇಶಕರನ್ನು ತಮ್ಮ ನಾಗವಾರದ ಮನೆಗೆ ಆಹ್ವಾನಿಸುವುದು. ಇಲ್ಲಿ ಒಂದು ವಿಚಾರವನ್ನು ಗಮನಿಸಬೇಕು : "ಕಥೆ ಹೇಳುತ್ತೇನೆ ಕೇಳಿ" ಅಂತ ಹೇಳಿಕೊಂಡು ಬರುವವರ ಸಂಖ್ಯೆ ಇಲ್ಲಿ ಸಾವಿರಾರು. ಒಂದು ಕಥೆ ಕೇಳಲು ಕನಿಷ್ಠವೆಂದರೂ 3 ಗಂಟೆ ಬೇಕೇ ಬೇಕು. ಇದು ಶಿವಣ್ಣನಂಥಾ ತಾರೆಯರಿಗೆ ಅತ್ಯಂತ ಅಮೂಲ್ಯ ಸಮಯ. ಸುಮ್ಮನೇ ಯಾವುದೋ ಇಷ್ಟವಿಲ್ಲದ ಕಥೆಯನ್ನು ಕೇಳಿಸಿಕೊಂಡರೆ ವೃತ್ತಿಬದುಕಿನ ಒಂದು ದಿನದ 3 ಗಂಟೆ ವ್ಯರ್ಥವಾದಂತೆಯೇ. ಹೀಗಾಗಿ ನಂಬಿಕಸ್ತ ಮಂದಿಗೆ ಮಾತ್ರ ಈ ಅವಕಾಶ ಸಿಗುತ್ತದೆ! ಈ ನಡುವೆ ಮುಲಾಜಿಗೊಳಗಾಗಿ ಗೆಳೆಯರ, ಆಪ್ತ ನಿರ್ಮಾಪಕರ, ನಿರ್ದೇಶಕರ, ಕುಟುಂಬಸ್ತರ ಕಥೆಯನ್ನು ಕೇಳಲೇ ಬೇಕಾದ ಅನಿವಾರ್ಯತೆ ಶಿವಣ್ಣನಿಗಿರುತ್ತದೆ. ಇವೆಲ್ಲವನ್ನು ಹೊರತುಪಡಿಸಿ ತಮಗೆ ಇಷ್ಟವಾಗಬಹುದಾದ ಕಥೆಗಾರರನ್ನು ತಮ್ಮ ಮನೆಗೆ ಕರೆಸಿಕೊಳ್ಳುತ್ತಾರೆ ಶಿವಣ್ಣ. ಈ ಮನೆಯಲ್ಲಿ ಅದೊಂದು ಖಾಸಗೀ ಕೋಣೆ ಇದೆ. ಇದು ಕಥೆ ಕೇಳಲೆಂದೇ ಶಿವಣ್ಣ ಉಪಯೋಗಿಸುವ ಕೋಣೆ. ಇಲ್ಲಿ ನಾಲ್ಕಾರು ಸೋಫಾ ಸೆಟ್ ಇವೆ. ಕಥೆ ಕೇಳಲು ಶಿವಣ್ಣನಿಗಾಗಿಯೇ ಒಂದು ಸ್ಪೆಶಲ್ ಸೋಫಾ ಸೆಟ್ ಇದೆ. ಕಥೆ ಹೇಳಲು ಬರುವವರಿಗೆ ಇಲ್ಲಿ ಸಿಗುತ್ತದೆ ರಾಜಾತಿಥ್ಯ! ಮೊದಲು ಚಹಾ ಸೇವನೆ. ನಂತರ ಭೂರೀ ಭೋಜನ. ಆದರೆ ಒಂದೇ ಒಂದು ಕಂಡೀಷನ್ : ಕಥೆ ಹೇಳುವವರು ಅರೆಹೊಟ್ಟೆಯಲ್ಲಿರಬೇಕು! ಹೊಟ್ಟೆ ತುಂಬಾ ತಿಂದು ಕಥೆ ಹೇಳಲು ಕೂತರೆ ಕೇಳುವವರಿಗೂ, ಹೇಳುವವರಿಗೂ ನಿದ್ದೆ ಬರುವ ಅಪಾಯವಿದೆ!
ಇದೆಲ್ಲಾ ಆದ ಮೇಲೆ ತಮಗಾಗಿ ಸಿದ್ಧಪಡಿಸಿದ ಸೋಫಾ ಸೆಟ್ ಮೇಲೆ ಚಕ್ಕಳಂಬಕ್ಕಳಂ ಹಾಕಿ ಕೂತರೆಂದರೆ ಶಿವಣ್ಣ ಕಥೆ ಕೇಳಲು ರೆಡಿ ಎಂದರ್ಥ. ಅನುಕೂಲಕ್ಕಾಗಿ ಉದ್ದನೆಯ ಚೆಡ್ಡಿ ಹಾಕಿಕೊಂಡಿರುತ್ತಾರೆ ಶಿವಣ್ಣ. ಮನೆಯಲ್ಲಿರುವಾಗ ಶಿವಣ್ಣ ಹೇಗಿರುತ್ತಾರೆ ಎನ್ನುವ ಕುತೂಹಲ ನಮ್ಮವರಿಗಿರುತ್ತದೆ. ಯಾವ ಆಡಂಬರವೂ ಇಲ್ಲದೇ ಶಿವಣ್ಣ ಕಥೆ ಕೇಳಲು ಕಿವಿಯನ್ನು ರೆಡಿ ಮಾಡಿಟ್ಟುಕೊಂಡು ಕೂತರೂ ಕಥೆ ಹೇಳುವವ ತಡವರಿಸುತ್ತಿರುತ್ತಾನೆ! ಕಾರಣ, ಶಿವಣ್ಣನ ಬಗ್ಗೆ ಇರುವ ಗೌರವ ಮತ್ತು ಭಯ! ಆದರೆ ಶಿವಣ್ಣ ಅವೆಲ್ಲವನ್ನೂ ಒಬ್ಬ ಮಾಂತ್ರಿಕನಂತೆ ಹೋಗಲಾಡಿಸಿ ಕಥೆಗಾರನನ್ನು ಕಥೆ ಹೇಳುವ ಮೂಡಿಗೆ ತಂದಿರುತ್ತಾರೆ. So nice of SHIVANNA.
ಮೊದಲ 10 ನಿಮಿಷ ನಿರ್ಣಾಯಕ. ಈ 10 ನಿಮಿಷದ one line story ಹೇಳುವಷ್ಟರಲ್ಲಿ ಶಿವಣ್ಣನ ಮುಖ ಅರಳಿದರೆ ಆ ಕಥೆ ಆಯ್ಕೆಯಾದಂತೆ ಲೆಕ್ಕ. "ಸಾಕು, ನಾನು available" -ಅಂತ ಹೇಳಿ ಮಾರುತ್ತರಕ್ಕೂ ಕಾಯದೇ ಹೊರಟು ಬಿಡುತ್ತಾರೆ ಶಿವಣ್ಣ. ಮುಂದಿನ ಒಂದೆರಡು ತಿಂಗಳಲ್ಲೇ ಆ ಚಿತ್ರ ಸೆಟ್ಟೇರಿಬಿಡುತ್ತದೆ! ಕಥೆ ಇಷ್ಟವಾಗದಿದ್ದರೂ ಎದ್ದು ಹೊರಟು ಬಿಡುವುದಿಲ್ಲ. 3 ಗಂಟೆಗಳ ಕಾಲ ಕೂತು ತಾಳ್ಮೆಯಿಂದ ಕಥೆ ಕೇಳುತ್ತಾರೆ. ನಡು ನಡುವೆ ಬಿಸಿ ಬಿಸಿ ಚಹಾ ಸೇವನೆ ನಡೆದೇ ಇರುತ್ತದೆ. ಶಿವಣ್ಣನಿಗೆ ಆಗಾಗ ಚಹಾ ಒದಗಿಸಲೆಂದೇ ಒಬ್ಬ ವ್ಯಕ್ತಿ ಕಾದಿರುತ್ತಾನೆ. ಶಿವಣ್ಣನ ಸೂಚನೆ ಅವನಿಗೆ ಮಾತ್ರ ಅರ್ಥವಾಗುತ್ತದೆ! ಕಮ್ಮಿ ಚಹಾ ಕುಡಿದರೆ ಶಿವಣ್ಣ ಆ ಕಥೆಯನ್ನು ಇಷ್ಟಪಟ್ಟಿದ್ದಾರೆ ಎಂದರ್ಥ. ಹೆಚ್ಚೆಚ್ಚು ಚಹಾ ಸೇವನೆಯಾದರೆ ಕಥೆ ಇಷ್ಟವಾಗಲಿಲ್ಲ ಎಂದರ್ಥ. ಈ ನಡುವೆ ಆ ಕಥೆಯಲ್ಲಿ ಒಂದೇ ಒಂದು ಎಳೆ ಇಷ್ಟವಾದರೂ ಸಾಕು, ಅದನ್ನೇ ಬೇರೆ ರೀತಿಯಲ್ಲಿ ನೆರೇಟ್ ಮಾಡುವಂತೆ ವಿನಂತಿಸಿಕೊಳ್ಳುತ್ತಾರೆ ಶಿವಣ್ಣ. ಹೇಳುವ ಕಥೆ ತುಂಬಾ ತುಂಬಾ ಇಷ್ಟವಾದರೆ ತಾವು ಕೂತಿರುವ ಸೋಫಾದಿಂದ ಎದ್ದೆದ್ದು ಕುಣಿಯುವುದು ಅವರ ರೂಢಿ! ಇಂಥಾ ಕಥೆಯನ್ನು ಈಗಾಗಲೇ ಅಡ್ವಾನ್ಸ್ ಕೊಟ್ಟಿರುವ ನಿರ್ಮಾಪಕರಿಗೆ ಸಿನೆಮಾ ಮಾಡುವಂತೆ ಇವರೇ ಒಪ್ಪಿಸಿಬಿಡುತ್ತಾರೆ! ಅರ್ಧ ಕಥೆ ಇಷ್ಟವಾಗಿದ್ದರೆ ಸಂಬಂಧಿಸಿದವರೇ ನಿರ್ಮಾಪಕರನ್ನು ಹುಡುಕಿ ಒಪ್ಪಿಸುವಂತೆ ಕೇಳಿಕೊಳ್ಳುತ್ತಾರೆ. ತುಂಬಾ ತುಂಬಾ ಇಷ್ಟವಾದ ಕಥೆಯ ಬೆನ್ನು ಬಿದ್ದರೆ ಸ್ವತಃ ಶಿವಣ್ಣನೇ ಶತಾಯ ಗತಾಯ ಆ ಸಿನೆಮಾವನ್ನು ಮಾಡಿಯೇ ತೀರುತ್ತಾರೆ! ಹೀಗೆ ತಾವೇ ಇಷ್ಟಪಟ್ಟು ಮಾಡಿದ ಸಿನೆಮಾ ಸೂಪರ್ ಹಿಟ್ ಆಗಿವೆ ಅಂದರೆ ನೀವು ನಂಬಲೇ ಬೇಕು.
ಇಷ್ಟಪಟ್ಟ ಕಥೆ ಸಿನೆಮಾ ಆಗಿ ತೆರೆ ಕಂಡು 100 ದಿನ ಓಡಿದರೂ ಸಾಕು, ಆ ಕಥೆಗಾರನನ್ನು ಮನೆಗೆ ಕರೆದು ಅದೇ ಕೋಣೆಯ ಅದೇ ಸೋಫಾದ ಮೇಲೆ ಕೂರಿಸಿ ತಾವೇ ಕೈಯಾರೆ ಶಾಲು ಹೊದೆಸಿ, ಹಣ್ಣುಹಂಪಲುಗಳ ಬುಟ್ಟಿಕೊಟ್ಟು, ಜೊತೆಗೊಂದು ಪುಟ್ಟ ಕ್ಯಾಶ್ ಗಿಫ್ಟ್ ಕೊಟ್ಟು ಸನ್ಮಾನಿಸುವಂಥಾ ಹೃದಯವಂತ ನಮ್ಮ ಈ ಶಿವಣ್ಣ..!!!
" ಓಂ" ಸಿನೆಮಾದ ಕಥೆ ಹೇಳುವಾಗ ಉಪೇಂದ್ರರಿಗಾದ ವಿಶಿಷ್ಟ ಅನುಭವವನ್ನು ಅವರ ಬಾಯಲ್ಲೇ ಕೇಳಬೇಕು. ಅಂತೆಯೇ "ಜೋಗಿ" ಚಿತ್ರದ ಕಥೆ ಹೇಳುವಾಗಲೂ ರೋಮಾಂಚನಗೊಂಡ ಶಿವಣ್ಣ ಎದ್ದೆದ್ದು ಕುಣಿದದ್ದನ್ನು ಪ್ರೇಮ್ ಮರೆತಿಲ್ಲ!
ನೋಡಿದರಲ್ಲ, ಒಂದು ಕಥೆಯ ಆಯ್ಕೆ ಹಿಂದಿನ ಕಥೆಯನ್ನು? 15 ನಿಮಿಷದಲ್ಲಿ ಇದನ್ನು ಹೇಳುವುದು ಸುಲಭ, ಆದರೆ ಒಂದು ಕಥೆ ಸಿನೆಮಾ ಆಗುವ ಪ್ರಾಸೆಸ್ ಇದೆಯಲ್ಲಾ ಕಷ್ಟ ಕಷ್ಟ...
◆ ಇಂಥಾ ಶಿವಣ್ಣನ ಬರ್ತ್ ಡೇ ಇಂದು. ಹ್ಯಾಪ್ಪಿ ಬರ್ತ್ ಡೇ ಶಿವಣ್ಣಾ...
ಲೇಖನ -ಹಿರಿಯ ಸಿನಿಮಾ ಪತ್ರಕರ್ತರು✍️ ಶ್ರೀ ಗಣೇಶ ಕಾಸರಗೋಡು

Social Plugin