◆ ಕೊನೆಗೂ ಜಯಂತಿಗೆ ಜಯ ಸಿಗಲೇ ಇಲ್ಲ...! ◆
^^^^^^^^^^^^^^^^^^^^^^^^^^^^^^^^^^^^^^^^^^
ಲೇಖನ : ಹಿರಿಯ ಸಿನಿಮಾ ಪತ್ರಕರ್ತರು : ಗಣೇಶ ಕಾಸರಗೋಡು.

      ಅಭಿನಯಶಾರದೆ ಜಯಂತಿಯವರು ನಟಿಸಿದ ಚಿತ್ರಗಳ ಆರಂಭಿಕ ದಿನಗಳ ವೈಭವವನ್ನು ಓದಿ ತಿಳಿದುಕೊಂಡವನು ನಾನು. ಕಮಲಕುಮಾರಿ 'ಜಯಂತಿ'ಯಾಗಿ ನಟಿಸಿದ 'ಜೇನುಗೂಡು' ಚಿತ್ರವನ್ನು ನಾನು ತೆರೆಯ ಮೇಲೆ ನೋಡಿ ಆನಂದಿಸಿದ್ದೇನೆ. ಆದರೆ 'ಎಡಕಲ್ಲು ಗುಡ್ಡದ ಮೇಲೆ' ಚಿತ್ರದ ನಂತರದ ಅವರ ಬದುಕನ್ನು ತುಂಬಾ ಹತ್ತಿರದಿಂದ ಬಲ್ಲವನು ನಾನು. ಮೇಲಿಂದ ಮೇಲೆ ಗಟ್ಟಿಗಿತ್ತಿಯಂತೆ ಕಂಡರೂ ಒಳಗೊಳಗೇ ಪುಕ್ಕಲು ಹೆಂಗಸು. ತೆಗೆದುಕೊಂಡ ಹುಂಬ ನಿರ್ಧಾರಗಳೇ ಆಕೆಯ ವೃತ್ತಿ ಬದುಕಿನ ಪಾಲಿಗೆ ಮುಳುವಾಯಿತು. ಬಹಾದ್ದೂರ್ ಗಂಡು, ಶ್ರೀಮಂತನ ಮಗಳು, ಮನಸ್ಸಿನಂತೆ ಮಾಂಗಲ್ಯ, ಧರ್ಮ ದಾರಿ ತಪ್ಪಿತು, ಮಸಣದ ಹೂವು...ಒಂದಾ ಎರಡಾ? ಬಹುಭಾಷಾ ನಟಿ ಬೇರೆ. ಅವಕಾಶಗಳ ಮಹಾಪೂರವೇ ಹರಿದು ಬಂತು. ಜತೆಗೆ ಕೈತುಂಬಾ ಸಂಪಾದನೆ. ಪ್ರಶಸ್ತಿಗಳು ಹುಡುಕಿಕೊಂಡು ಬಂದುವು. ಇಂಥಾ ಕಲಾವಿದೆ ವರನಟ ರಾಜಕುಮಾರ್ ಜತೆ ನಟಿಸಿದ ಚಿತ್ರಗಳ ಸಂಖ್ಯೆಯೇ ಬರೋಬ್ಬರಿ ನಲವತ್ತು! ಈ ಚೆಂದುಳ್ಳಿ ಚೆಲುವೆಯನ್ನು ಮದುವೆಯಾಗಲು ತುದಿಗಾಲ ಮೇಲೆ ನಿಂತಿದ್ದ ಅತಿರಥ ಮಹಾರಥ ನಾಯಕನಟರಿದ್ದರು, ಕೋಟ್ಯಾಧಿಪತಿ ಬ್ಯುಸಿನೆಸ್'ಮೆನ್'ಗಳಿದ್ದರು. ಆದರೆ ಇವರನ್ನೆಲ್ಲಾ ಕ್ಯಾರೇ ಅನ್ನದ ಜಯಂತಿ ತೆಲುಗಿನ ನಿರ್ದೇಶಕರೊಬ್ಬರಿಗೆ ಎರಡನೇ ಹೆಂಡತಿಯಾಗುವ ಮೂಲಕ ತಮ್ಮ ವೃತ್ತಿ ಬದುಕಿನ ಪತನಕ್ಕೆ ಮೊದಲ ಮೊಳೆ ಹೊಡೆದರು! ನಂತರ ಇವರಿಂದ ದೂರ ಹೋದ ಜಯಂತಿ ತಮ್ಮ ವಯಸ್ಸಿಗಿಂತಲೂ ಕಿರಿಯನಾದ ಚೆಲುವನೊಬ್ಬನನ್ನು ವರಿಸಿದರು. ಇವರ ಅಂದಚೆಂದಕ್ಕೆ ಮತ್ತು ತಿಜೋರಿಯ ದುಡ್ಡಿಗೆ ಮರುಳಾಗಿ ಮದುವೆಯಾದ ಆತ ನಡುವೆ ಕೈಕೊಟ್ಟ. ಆತನಿಗಾಗಿ ನಿರ್ಮಿಸಿದ ಚಿತ್ರಗಳು ಬೋರಲು ಮಲಗಿದಾಗ ಇದ್ದಬದ್ದ ದುಡ್ಡೆಲ್ಲವನ್ನೂ ಕಳಕೊಂಡು ಅನಾಥೆಯಂತಾದರು ಜಯಂತಿ! ವೃತ್ತಿ ಬದುಕಿನಲ್ಲಿ ಏರಿಳಿತ ಕಂಡ ಈ ಕಲಾವಿದೆ ಪುಟ್ಟ ಬಾಡಿಗೆ ಮನೆಯಲ್ಲಿ ಮಗನೊಂದಿಗೆ ಬದುಕು ನಡೆಸಿದವರು. ಮಗ ಕೃಷ್ಣಕುಮಾರನ ಮುರಿದು ಬಿದ್ದ ದಾಂಪತ್ಯ ಕೂಡಾ ಜಯಂತಿಯವರಿಗೆ ಹೊಸ ತಲೆಬೇನೆ ತಂದಿತ್ತು...
     ಇಂಥಾ ಜಯಂತಿ ನನ್ನನ್ನು ಎಲ್ಲೇ ಕಂಡರೂ ಕೈಯೆತ್ತಿ ವಿಶ್ ಮಾಡುವ ಸಂಭ್ರಮವನ್ನು ನೀವು ನೋಡಬೇಕಿತ್ತು. ಸಹೃದಯಿ, ಮುಗ್ಧೆ, ನಿಷ್ಕಳಂಕ ಮನಸ್ಸಿನ ಇಂಥಾ ವ್ಯಕ್ತಿಗಳು ಈ ಬಣ್ಣದ ಲೋಕದಲ್ಲಿ ಸಿಗುವುದು ಅಪರೂಪ...ಈಗ ಜಯಂತಿ ಇಲ್ಲ, ಆದರೆ ಅವರ ಒಡನಾಟದ ನೆನಪು ಮಾತ್ರ ಚಿರಂತನ...