ತೇರದಾಳ : ವೈಯಕ್ತಿಕ ಕಾಳಜಿಯಿಂದ ಮಹಾಮಾರಿ ಕೊರೊನಾವನ್ನು ಹೋಗಲಾಡಿಸಲು ಸಾಧ್ಯ. ಬಡವರಿಗೆ, ವಯೋವೃದ್ಧರು ಹಾಗೂ ಕೂಲಿ ಕಾರ್ಮಿಕರಿಗೆ ತಮ್ಮ ವಾರ್ಡಗಳಲ್ಲಿಯೇ ಲಸಿಕೆಯನ್ನು ಪಡೆಯುವ ಉದ್ದೇಶದಿಂದ ಲಸಿಕಾ ಕೇಂದ್ರಗಳನ್ನಾಗಿ ಮಾಡಲಾಗಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಧಿನಾಥ ಸಪ್ತಸಾಗರ ಹೇಳಿದರು.
ಪಟ್ಟಣದ ಅಂಬೇಡ್ಕರ್ ಪ್ರತಿಮೆ ಆವರಣದಲ್ಲಿ ಲಸಿಕೆ ಹಾಕಲು ಚಾಲನೆ ನೀಡಿ ಮಾತನಾಡಿದ ಅವರು ಲಸಿಕೆಯನ್ನು ಹಾಕಿಸಿಕೊಳ್ಳಲು ಹಿಂಜರಿಯಬೇಡಿ. ಜೀವ ಅತ್ಯಮೂಲ್ಯವಾದದು, ಕೋವಿಡ್ ನಿಯಮಗಳನ್ನು ನಿರ್ಲಕ್ಷ್ಯ ಮಾಡಿದ್ದರಿಂದ ಹೆಚ್ಚಾಗಿ ಸಾವುಗಳು ಸಂಭವಿಸಿದವು. ಯುವಕರು ತಮ್ಮ ಜವಾಬ್ದಾರಿಗಳನ್ನು ಅರಿಯಬೇಕು. ಹಾಗೂ ಸರಕಾರದ ನಿಯಮಗಳನ್ನು ಪಾಲಿಸಬೇಕು. ಕೊರೊನಾ ವಾರಿಯರ್ಸ್ ಗಳಾದ ಪೋಲಿಸರು, ವೈದ್ಯರುಗಳು, ಆಶಾ ಕಾರ್ಯಕರ್ತರು ಹಾಗೂ ಪುರಸಭೆ ಪೌರ ಕಾರ್ಮಿಕರು ತಮ್ಮ ಜೀವದ ಹಂಗನ್ನು ಮರೆತು ಸಾರ್ವಜನಿಕರ ಸೇವೆ ಮಾಡುತ್ತಿದ್ದಾರೆ. ಅವರ ಈ ಸಮಾಜ ಕಳಕಳಿ ಸೇವೆಗೆ ನಾವು ನೀವೆಲ್ಲರೂ ಸಹಕಾರ ನೀಡಿ ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಸ್ಯಾನಿಟೈಸರ್‌ನಿಂದ ಆಗಾಗ ಕೈತೊಳೆಯುವುದನ್ನು ಪಾಲಿಸಬೇಕು. ಈಗ ಲಾಕ್‌ಡೌನ್ ಹಂತ ಹಂತವಾಗಿ ತೆರವು ಆಗುತ್ತಿದೆ. ಆದರೆ ಕೊರೊನಾ ಹೋಗಿದೆ ಎಂದು ಮೈಮರೆತರೆ ನಾವು ಮುಂದೆ ಬಾರಿ ದೊಡ್ಡ ಆಘಾತವನ್ನು ಕಾಣುತ್ತೇವೆ. ಅದಕ್ಕಾಗಿ ಎಲ್ಲರೂ ಸರಕಾರದ ನಿಯಮಗಳನ್ನು ಪಾಲಿಸಬೇಕು ಎಂದರು.
ಅಂಬೇಡ್ಕರ ಪ್ರತಿಮೆ ಆವರಣದಲ್ಲಿ ಇಂದು ೫೨ ಜನರಿಗೆ ಲಸಿಕೆಯನ್ನು ಹಾಕಲಾಯಿತು.ಈ ಸಂದರ್ಭದಲ್ಲ ಕೃಷ್ಣಾ ದೊಡಮನಿ, ಅಂಬಿಕಾ ತೆಳಗಡೆ, ಕುಮಾರ ಸರಿಕರ, ಮಾರುತಿ ವಾಜಂತ್ರಿ, ಕುಮಾರ ದೊಡಮನಿ, ಪ್ರಭು ರೋಡಕರ, ರವಿ ರೋಡಕರ, ಆಶಾ ಕಾರ್ಯಕರ್ತರು ಸೇರಿದಂತೆ ಇನ್ನಿತರರು ಇದ್ದರು.

Social Plugin