◆ ಕನ್ನಡ ಚಿತ್ರರಂಗದ ಇಬ್ಬರು ಖ್ಯಾತನಾಮರ ಬಂಗಲೆಗಳು ಮತ್ತಿಬ್ಬರು ಖ್ಯಾತನಾಮರ ಪಾಲಾಯಿತು! 
● ಒಬ್ಬರು : ದ್ವಾರಕೀಶ್, ಮತ್ತೊಬ್ಬರು : ಎಲ್.ಎನ್.ಶಾಸ್ತ್ರಿ 
ಲೇಖನ : ಹಿರಿಯ ಸಿನಿಮಾ ಪತ್ರಕರ್ತ ಶ್ರೀ ಗಣೇಶ ಕಾಸರಗೋಡು

      ಈ ಅನಿಶ್ಚಿತತೆಯ ಚಿತ್ರರಂಗದಲ್ಲಿ ಬುದ್ಧಿವಂತನಾದವನು ಚೆಂದದ ಬದುಕನ್ನು ಕಟ್ಟಿಕೊಂಡಾನು. ದಡ್ಡನಾದವನು ಮಾಡಿಟ್ಟಿದ್ದೆಲ್ಲವನ್ನೂ ಕಳಕೊಂಡು ಬೀದಿ ಪಾಲಾದಾನು. ಇದನ್ನೇ ವಿಧಿಯಾಟ ಅನ್ನೋದಾ? ಇಂಥಾ ವಿಧಿಯಾಟಕ್ಕೆ ಬಲಿ ಬಿದ್ದವರೆಂದರೆ ಕಳೆದ 50 ವರ್ಷಗಳಿಂದ ಚಿತ್ರರಂಗದಲ್ಲಿರುವ ದ್ವಾರಕೀಶ್ ಮತ್ತು ವಿಧಿಯ ವಿಕಟಾಟ್ಟಹಾಸದೆದುರು ನಿಂತು ಹೋರಾಡಲಾಗದೇ ಸೋತು ಸುಣ್ಣವಾಗಿ ಇಹಲೋಕ ತ್ಯಜಿಸಿದ ಗಾಯಕ ಎಲ್.ಎನ್.ಶಾಸ್ತ್ರಿ. 
     ದ್ವಾರಕೀಶ್ ಮನೆ ಇರುವುದು ಪ್ರತಿಷ್ಠಿತ ಎಚ್.ಎಸ್.ಆರ್.ಲೇಔಟ್'ನಲ್ಲಿ. ಒಂದರ ಹಿಂದೊಂದರಂತೆ ಸೋಲುಂಡ ದ್ವಾರಕೀಶ್ ಸಾಲ ತೀರಿಸಲೆಂದು ಈ ಮನೆಯನ್ನು ನಟ ರಿಷಭ್ ಶೆಟ್ಟಿಗೆ ಮಾರಿ ಕೈ ತೊಳೆದುಕೊಂಡರು. 
      ಈ ಕಡೆ ಶಾಸ್ತ್ರೀಯವರದ್ದೂ ಹೆಚ್ಚೂ ಕಮ್ಮಿ ಇದೇ ಸಾಲದ ಕಥೆಯೇ! ಸರಾಗವಾಗಿ ಸಾಗುತ್ತಿದ್ದ ಈ ಸಂಗೀತಗಾರನ ಬದುಕಿಗೆ ಅಡ್ಡ ಬಂದದ್ದೇ ಒಂದು ಸಿನಿಮಾ. ಆ ಸಿನಿಮಾದ ಹೆಸರು : ’ಕನಸಲೂ ನೀನೇ ಮನಸಲೂ ನೀನೇ'. ನಂಜುಂಡ ಎಂಬ ಹೆಸರಿನ ಡೈರೆಕ್ಟರನ್ನು ನಂಬಿ ಕೋಟಿ ಕಳೆದುಕೊಂಡದ್ದರಿಂದಾಗಿ ಕೆಂಗೇರಿ ರಿಂಗ್ ರಸ್ತೆಯ ಬಳಿ ಕಟ್ಟಿಸಿದ್ದ ಸೊಗಸಾದ ಬಂಗಲೆಯನ್ನು ಮಾರಬೇಕಾಯಿತು. ಬದುಕಿದ್ದಿದ್ದರೆ ಹೇಗೋ ಮಾಡಿ ಸಾಲ ತೀರಿಸಿ ಮನೆ ಕಳಕೊಳ್ಳಬೇಕಾದ ಪ್ರಸಂಗದಿಂದ ಪಾರಾಗಬಹುದಿತ್ತೇನೋ? ಆದರೆ ನಡುವೆ ವಕ್ಕರಿಸಿದ ಲಿವರ್ ಕ್ಯಾನ್ಸರ್ ಕಾಯಿಲೆ ಶಾಸ್ತ್ರಿಗಳನ್ನು ಬಲಿ ತೆಗೆದುಕೊಂಡಿತು. ಕೊನೆಗೆ ಸಾಲ ತೀರಿಸಲೆಂದೇ ಶಾಸ್ತ್ರಿಗಳು ಆಸೆಯಿಂದ ಕಟ್ಟಿಸಿದ ಈ ಮನೆಯನ್ನು ಗಾಯಕ ರಾಜೇಶ್ ಕೃಷ್ಣ ಅವರಿಗೆ ಮಾರಾಟ ಮಾಡಲಾಯಿತು.