ವರದಿ : ವಿಜಯ ವಾಜಂತ್ರಿ
ತೇರದಾಳದಲ್ಲಿ ಜಮಖಂಡಿ ಟೆನಿಸ್ ಕ್ಲಬ್ ವತಿಯಿಂದ ಕೊರೊನಾ ಸೋಂಕಿನಿಂದ ಮೃತ ಪಟ್ಟವರಿಗೆ ಪರಿಹಾರದ ಹಣವನ್ನು ಶಾಸಕ ಸಿದ್ದು ಸವದಿ ವಿತರಿಸಿದರು.

ದೇವರ ಹುಂಡಿಗೆ ಹಣವನ್ನು ಹಾಕುವ ಬದಲು ಸಂಕಷ್ಟದಲ್ಲಿದ್ದವರಿಗೆ ಕೊಡುವುದು ಭಾಗ್ಯ
ತೇರದಾಳ : ದಿನಾಲು ವ್ಯಾಯಾಮ, ಪ್ರಾಣಾಯಾಮದಲ್ಲಿ, ಧ್ಯಾನವನ್ನು ಮಾಡುವುದರಿಂದ ಶರೀರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಶರೀರವನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು. ಕೊರೊನಾ ಇನ್ನೂ ಹೋಗಿಲ್ಲ ನಾವೆಲ್ಲರೂ ಮಾಸ್ಕ್ ಧರಿಸುವ ಮೂಲಕ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಸೋಂಕು ಉಲ್ಬಣವಾಗದಂತೆ ನಾವು ಎಚ್ಚರವಹಿಸಬೇಕಾಗಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
  ಪಟ್ಟಣದ ಕಲ್ಲಟ್ಟಿ ಹಾಗೂ ಅಂಬೇಡ್ಕರ ಸರ್ಕಲ್‍ದಲ್ಲಿ ಕೊರೊನಾ ಸೋಂಕಿನಿಂದ ಮೃತ ಪಟ್ಟ ಕುಟುಂಬಕ್ಕೆ ಜಮಖಂಡಿ ಟೆನಿಸ್ ಕ್ಲಬ್ ವತಿಯಿಂದ ಪರಿಹಾರದ ಹಣ ಹಾಗೂ ಆಹಾರ ಕಿಟ್‍ಗಳನ್ನು ವಿತರಿಸಿ ಮಾತನಾಡಿದರು. ಆಸಂಗಿಯಲ್ಲಿ ಹಾಗೂ ತೇರದಾಳದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರಿಗೆ ಸ್ವಲ್ಪ ಸಹಾಯ ಮಾಡೋಣವೆಂದು ನಾವು ಮಾತನಾಡಿದ್ದೇವು. ಅದೇ ಪ್ರಕಾರ ನಾವು ಟೆನಿಸ್ ಕ್ಲಬ್ ವತಿಯಿಂದ ಪರಿಹಾರವನ್ನು ಕೊಡಮಾಡಿದ್ದೇವೆ. ಕೊರೊನಾ ಸೋಂಕಿನಿಂದ ಮೃತ ಪಟ್ಟ ಬಿಪಿಎಲ್ ಕಟುಂಬದವರಿಗೆ ಪರಿಹಾರವನ್ನು ಸರಕಾರದಿಂದ ಘೋಷಣೆ ಮಾಡಲಾಗಿದೆ. ತಂದೆ ತಾಯಿಗಳು ತೀರಿಕೊಂಡು ಮಕ್ಕಳು ಅನಾಥವಾಗಿದ್ದರೆ ಅವರ ಶಿಕ್ಷಣಕ್ಕೆ ಸಹಾಯವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಮಾಡಲಿದೆ. ಪರಿಹಾರ ವಿತರಿಸಲು ಮಾರ್ಗದರ್ಶಿ ಬಂದಿಲ್ಲ. ಅದು ಬಂದ ನಂತರ ವಿತರಿಸಲಾಗುವುದು. ಇಂತಹ ಕುಟುಂಬಗಳನ್ನು ಗುರುತಿಸಿ ಕೈಲಾದಷ್ಟು ಸಹಾಯ ಮಾಡಿದರೆ ಅದೊಂದು ಭಾಗ್ಯ. ದೇವರ ಹುಂಡಿಗೆ ಹಣವನ್ನು ಹಾಕುವ ಬದಲು ಇಂತಹ ಕುಟುಂಬಗಳಿಗೆ ಸಹಾಯ ಮಾಡಬೇಕು ಎಂದರು. 
  ಪಟ್ಟಣದ ಕಲ್ಲಟ್ಟಿ ಗಲ್ಲಿಯ ರಾವಳ ಮನೆತನದಲ್ಲಿ ತಂದೆ ತಾಯಿ ಮೃತರಾದ ನಾಲ್ಕು ದಿನಗಳಲ್ಲಿ ಮಗನು ಮೃತರಾಗಿರುವುದರಿಂದ ಕುಟುಂಬದಲ್ಲಿ ಸೊಸೆ ಹಾಗೂ ಮೊಮ್ಮಕ್ಕಳು ಮಾತ್ರ ಇದ್ದು ಹಾಗೂ ಅಂಬೇಡ್ಕರ ಸರ್ಕಲ್‍ದಲ್ಲಿನ ಕೇಶವ ತೇರದಾಳ ಕುಟುಂಬ ಸೇರಿದಂತೆ ಎರಡು ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದನ್ನು ತಿಳಿದು ಧನ ಸಹಾಯ ಹಾಗೂ ಆಹಾರ ಕಿಟ್‍ನ್ನು ವಿತರಿಸಲಾಯಿತು.
  ಉಪವಿಭಾಗಾಧಿಕಾರಿ ಸಿದ್ದು ಹುಲ್ಲೋಳ್ಳಿ ಮಾತನಾಡಿ ಸಂದಿಗ್ಧ ಕುಟುಂಬಗಳಿಗೆ ಸಹಾಯ ಮಾಡುವುದರಿಂದ ಒಂದು ಅನಾಥ ಕುಟುಂಬಕ್ಕೆ ಸಹಾಯ ಮಾಡಿದಂತಾಗುತ್ತದೆ. ದಿನಾಲು ನಾವು ಆಟ ಆಡುವುದರಿಂದ ನಮಗೆ ಕೊರೊನಾ ಬಂದಿಲ್ಲ. ದಿನಾಲು ಆಟವಾಡುವುದರಿಂದ ದೇಹ ಸಧೃಡವಾಗುತ್ತದೆ ಇದರಿಂದ ನಮಗೆ ಕೊರೊನಾ ಬಂದಿಲ್ಲ ಎಂದರು.
   ನಗರ ಘಟಕ ಅಧ್ಯಕ್ಷ ಮಹಾವೀರ ಕೊಕಟನೂರ, ಗ್ರಾಮೀಣ ಮತಕ್ಷೇತ್ರದ ಅಧ್ಯಕ್ಷ ಸುರೇಶ ಅಕ್ಕಿವಾಟ, ಪ್ರಭಾರಿ ಅಧ್ಯಕ್ಷ ರಾಮಣ್ಣ ಹಿಡಕಲ್, ನಾಗಪ್ಪ ದೊಡಮನಿ, ನಿಂಗಪ್ಪ ಮಾಲಗಾವಿ, ಸಿದ್ದು ಅಮ್ಮನಗಿ, ಜಮಖಂಡಿ ಟೆನಿಸ್ ಕ್ಲಬ್‍ದ ಪದಾಧಿಕಾರಿಗಳು, ಪುರಸಭೆ ಸದಸ್ಯರು ಸೇರಿದಂತೆ ಇನ್ನಿತರರು ಇದ್ದರು.