ವರದಿ : ವಿಜಯ ವಾಜಂತ್ರಿ
ತೇರದಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶವ ಮರಣೋತ್ತರ ಪರೀಕ್ಷಾ ಕೊಠಡಿಯನ್ನು ಸ್ಥಳಾಂತರಿಸಬೇಕು ಎಂದು ಪ್ರವೀಣ ನಾಡಗೌಡ ಹಾಗೂ ವಾರ್ಡ ಜನರು ಸೇರಿ ಡಾ.ಸುದರ್ಶನ ನಿಡೋಣಿ ಅವರಿಗೆ ಮನವಿ ಸಲ್ಲಿಸಿದರು.

ಶವ ಮರಣೋತ್ತರ ಪರೀಕ್ಷಾ ಕೊಠಡಿಯನ್ನು ಸ್ಥಳಾಂತರಿಸುವಂತೆ ಮನವಿ

ತೇರದಾಳ : ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೂತನವಾಗಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಆರಂಭಿಸಿರುವ ಶವ ಮರಣೋತ್ತರ ಪರೀಕ್ಷಾ ಕೊಠಡಿಯನ್ನು ಸ್ಥಳಾಂತರಿಸಬೇಕು ಎಂದು ಯುವ ಮುಖಂಡರಾದ ಪ್ರವೀಣ ನಾಡಗೌಡ ಮತ್ತು ವಾರ್ಡಿನ ಸದಸ್ಯೆ ನಸರೀನುಬಾನು ನಗಾರ್ಜಿ ಹಾಗೂ ಜನರು ಸೇರಿ ವೈದ್ಯಾಧಿಕಾರಿ ಡಾ.ಸುದರ್ಶನ ನಿಡೋಣಿ ಅವರಿಗೆ ಮನವಿ ಸಲ್ಲಿಸಿದರು.
  ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಶವ ಮರಣೋತ್ತರ ಪರೀಕ್ಷಾ ಕೊಠಡಿಯ ನಿರ್ಮಾಣ ಕಟ್ಟಡ ಕಾಮಗಾರಿಯನ್ನು ಪ್ರಾರಂಭಿಸಿದ್ದು. ಅದು ಅವೈಜ್ಞಾನಿಕ ಸ್ಥಳದಲ್ಲಿ ಕಟ್ಟುತ್ತಿದ್ದಾರೆ. ಈಗ ಕಟ್ಟುತ್ತಿರುವ ಸ್ಥಳದ ಸಮೀಪದಲ್ಲಿಯೇ ಜನರ ವಾಸಸ್ಥಳದ ಮನೆಗಳಿವೆ. ಇದು ಜನರಿಗೆ ಭಯವನ್ನುಂಟು ಮಾಡುತ್ತಿದೆ. ಇದರಿಂದ ಅಲ್ಲಿ ವಾಸಿಸುವ ಜನರಿಗೆ ತೊಂದರೆಯಾಗುತ್ತಿದೆ. ಸಮೀಪದಲ್ಲಿಯೇ ರಸ್ತೆಯಿರುವುದರಿಂದ ಮಕ್ಕಳು ಹಾಗೂ ಹಿರಿಯ ನಾಗರಿಕರು ತಿರುಗಾಡುತ್ತಿರುತ್ತಾರೆ. ಹಾಗೂ ಕೊಳೆತ ಶವಗಳಿಂದ ದುರ್ವಾಸನೆ ಬರುತ್ತದೆ. ಈ ಕಟ್ಟಡ ನಿರ್ಮಾಣ ಮಾಡುವುದರಿಂದ ಜನರಿಗೆ ತೊಂದರೆಯಾಗುತ್ತದೆ. ಅದಕ್ಕೆ ಇದನ್ನು ಸ್ಥಳಾಂತರಿಸಿ ಬೇರೆಡೆಗೆ ನಿರ್ಮಾಣ ಮಾಡಬೇಕು. ಇದನ್ನು ನಿರ್ಮಿಸಲು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸಾಕಷ್ಟು ಖಾಲಿ ಜಾಗೆಯಿದ್ದು ಅದನ್ನು ಬಿಟ್ಟು ಮನೆಗಳ ಸಮೀಪದಲ್ಲಿಯೇ ನಿರ್ಮಿಸುವುದು ಅವೈಜ್ಞಾನಿಕವಾಗಿದೆ. 
  ಶವ ಮರಣೋತ್ತರ ಪರೀಕ್ಷಾ ಕೊಠಡಿಯು ಜನವಸತಿ ಇಲ್ಲದ ಸ್ಥಳದಲ್ಲಿ ಮತ್ತು ವಸತಿ ಸ್ಥಳದಿಂದ ದೂರ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ನಿರ್ಮಾಣ ಮಾಡಬೇಕು ಎಂಬ ನಿಯಮವಿರುತ್ತದೆ. ಅದನ್ನು ಬಿಟ್ಟು ಜನವಸತಿ ಸಮೀಪದಲ್ಲಿಯೇ ನಿರ್ಮಾಣ ಮಾಡುತ್ತಿರುವುದನ್ನು ಕೈಬಿಡಬೇಕು. ಒಂದು ವೇಳೆ ಅದೇ ಸ್ಥಳದಲ್ಲಿ ನಿರ್ಮಾಣ ಮಾಡಲು ಮುಂದಾದರೆ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಯುವ ದುರೀಣ ಪ್ರವೀಣ ನಾಡಗೌಡ, ಪುರಸಭೆ ಸದಸ್ಯೆ ನಸರೀನಬಾನು ನಗಾರ್ಜಿ, ಇಕ್ಬಾಲ ಅಲಾಸ, ರಾಜೇಸಾಬ ನಗಾರ್ಜಿ, ಮೈನೂದ್ದೀನ ಜಮಖಂಡಿ, ಶಿವಪ್ಪ ಖವಾಸಿ, ಅಲ್ಲಾಭಕ್ಷ ನಾಯಿಕವಾಡಿ, ರಿಯಾಜ ಕೊರಬು, ಬಿಬವ್ವ ಜಾಧವ, ಶಾಂತವ್ವಾ ಪಾಟೀಲ ಸೇರಿದಂತೆ ಇನ್ನಿತರರು ಇದ್ದರು.