ಈವತ್ತಿನ ಫಲಿತಾಂಶಗಳ Take Home ಏನಿರಬೇಕೆಂದರೆ…
- - - - - - - - - 
ಚುನಾವಣಾ ಫಲಿತಾಂಶಗಳಿಗೂ ಈ ಪೋಸ್ಟಿಗೂ ಸಂಬಂಧ ಇಲ್ಲ.  ನನ್ನನ್ನು ಹಾಡಿದ್ದೇ ಹಾಡೋ ಕಿಸಬಾಯಿ ದಾಸ ಅಂದ್ರೂ ಪರವಾಗಿಲ್ಲ. ನಿಮ್ಮ ತಲೆ ದಾಟಿ ಮೆದುಳಿನ ಒಳಗೆ ತಲುಪುವವರೆಗೂ ನಾನಿದನ್ನು ಹಾಡೋದೇ.

>>ಈ ಚುನಾವಣೆಯಲ್ಲಿ ಮತ್ತು ಈಗೀಗ ಚುನಾವಣೆಗಳಲ್ಲಿ ಯಾರೇ ಗೆದ್ರೂ ಯಾರೇ ಸೋತ್ರೂ ಏನೂ ವ್ಯತ್ಯಾಸ ಇಲ್ಲ. ಅದನ್ನು ಮಹಾಮಹಿಮ ಕೊರೊನಾ ಜಗನ್ಮಾರಿ ತೋರಿಸಿಕೊಟ್ಟಿದೆ. ಕಳ್ಳರು, ಸುಳ್ಳರು, ದಗಾಕೋರರು, ಬಾನಾಮತಿಗಳು ಏನೇನೋ ಹಿಕ್ಮತ್ ಮಾಡಿ ಗೆಲ್ತಾರೆ ಮತ್ತು ನನ್ನನ್ನು ನಿಮ್ಮನ್ನು ಹಿಂಡುವ ಕೆಲಸ ಮುಂದುವರಿಸ್ತಾರೆ.

>> ಜಂಡಾ-ಅಜೆಂಡಾಗಳಿಂದಲೂ ಪ್ರಯೋಜನ ಇಲ್ಲ. ಜಗನ್ಮಾರಿಯ ತೀವ್ರತೆ ಕೊನೆಯಾದ ಮೇಲೆ ಉಳಿಯುವ ಒಂದೇ ಒಂದು ಲೆಕ್ಕ ಎಂದರೆ, ಈ ಪ್ರವಾಹದಲ್ಲಿ ಸಾಯಬಹುದಾಗಿದ್ದ ಎಷ್ಟು ಜೀವಗಳನ್ನು ಉಳಿಸಿ ಬೆಟ್ಟಿಗೆ ಹಾಕಿದೆವು ಎಂಬುದು ಮಾತ್ರ. ACE 2 ಕಿಣ್ವ ಆಳುವವರಲ್ಲೂ ಇದೆ ವಿರೋಧ ಪಕ್ಷಗಳವರಲ್ಲೂ ಇದೆ. ಕೊರೊನಾಕ್ಕೆ ಕಣ್ಣಿರುವುದು ಯಾರಲ್ಲಿ “ಜಾಸ್ತಿ” ಇದೆ ಎಂಬತ್ತ. ಹಾಗಾಗಿ ಕೊರೊನಾ ಹೆಸರಲ್ಲಿ ನಡೆಯುವ ಯಾವುದೇ ರಾಜಕೀಯದಿಂದ ನಾಲಕ್ಕಾಣೆ ಲಾಭ ಇಲ್ಲ… ಬರೆದಿಟ್ಟುಕೊಳ್ಳಿ. ಯಾವನೇ ವ್ಯಕ್ತಿ ಸಾಯುವುದಿದ್ದರೆ, ಇಂತಹ ರಾಜಕೀಯ ಪಕ್ಷ, ಆಳುವ ಪಕ್ಷ, ನಾಯಕರಿಗೆ ಬೇಕಾದವನು, ಆ ಜಾತಿ, ಈ ಧರ್ಮ ಎಂಬ ಕಾರಣಕ್ಕಾಗಿ ಉಳಿಯಲಾರರು. ಹಾಗಾಗಿ ಎಚ್ಚೆತ್ತುಕೊಳ್ಳಿ.

>> “ದೀದಿ... ಓ.... ದೀದಿ” ಹಾಡಿನ ರಾಗ -ಮರಣರಾಗ; ತಾಳ - ಸೋಂಕುತಾಳ ಎಂಬುದನ್ನು ಈ ಚುನಾವಣೆ ಸಾಬೀತು ಮಾಡಿದೆ. (ಇದನ್ನು ನಾನು ಬೆಂಗಾಳ ಉದ್ದೇಶಿಸಿ ಹೇಳುತ್ತಿಲ್ಲ…. ಜನವರಿಯಿಂದೀಚೆಗೆ ನಡೆಸಿದ ಪ್ರಚಾರಸಭೆ, ಧಾರ್ಮಿಕ ಮೇಳ ಎಲ್ಲವನ್ನೂ ಉದ್ದೇಶಿಸಿ, ಎಲ್ಲರನ್ನೂ ಉದ್ದೇಶಿಸಿ ಉದಾಹರಣಾರ್ಥ ಒಂದನ್ನು ಎತ್ತಿ ತೋರಿಸಿ ಹೇಳುತ್ತಿದ್ದೇನೆ.) ಒಂದೋ ಎರಡೋ ಕಂತಿನಲ್ಲಿ ಮುಗಿಯಬಹುದಾಗಿದ್ದ ಚುನಾವಣೆಯನ್ನು ಎಂಟು ಕಂತಿಗೆ ಎಳೆದು ಇಂಚಿಂಚಲ್ಲೂ ಸೋಂಕು ಹರಡಿದ್ದು, ಈಗ ಬಲಿತು-ಮಲೆತು ನಿಂತಿದೆ. ಅಬ್ ಖೇಲ್ ಹೋಬೆ!!

>>ಸದ್ಯಕ್ಕೆ ವಿಜ್ಞಾನ ಹೇಳ್ತಿರೋದು ಮೇ 15ರ ಹೊತ್ತಿಗೆ ಪೀಕ್ ತಲುಪಿದರೆ ದಿನಕ್ಕೈದು ಲಕ್ಷ ಸೋಂಕಿತರು ಮತ್ತು ದಿನಕ್ಕೆ ಆರೆಂಟು ಸಾವಿರ ಜೀವಗಳು. ಏನು ಮಾಡ್ತೀರಿ? ಶ್ವೇತಪತ್ರ ಹೊರಡಿಸಿ. ಜನರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಿ. ಇನ್ನಷ್ಟು ಗೋಸರು ಮಾಡಿಕೊಳ್ಳಬೇಡಿ. ನಿಭಾಯಿಸೋಕೆ ಆಗ್ತಿಲ್ಲ ಅಂತಾದ್ರೆ, ಎಲ್ಲ ಪಕ್ಷಗಳ ಸರ್ಕಾರೇತರ ತಂಡವೊಂದನ್ನು ಕೊರೊನಾ ನಿಭಾವಣೆಗೆಂದೇ ರಚಿಸಿಕೊಂಡು, ಜವಾಬ್ದಾರಿಗಳನ್ನು ಹಂಚಿಕೊಂಡು ಕಾರ್ಯಾಚರಿಸಿ. ಪ್ರತಿಯೊಂದೂ ಸಂಸತ್ ಕ್ಷೇತ್ರ, ವಿಧಾನಸಭಾಕ್ಷೇತ್ರ ತಮ್ಮ ಜನಪ್ರತಿನಿಧಿಗಳ ಮುಖ ನೋಡುವಂತಾಗಲಿ. ಸೋತವರು,ಗೆದ್ದವರು, ಆಕಾಂಕ್ಷಿಗಳು, ಹತಾಶಿತರು ಎಲ್ಲ ಒಟ್ಟಿಗೆ ಸೇರಿ ಕೆಲಸ ಮಾಡಿ; ಈ ದೇಶದಲ್ಲಿ ಮನುಷ್ಯತ್ವದ ಬೇರು ಗಟ್ಟಿಯಾಗಿದೆ ಎಂದು ತೋರಿಸಿ.

>>ಕ್ರೈಸಿಸ್ ಮುಂದೊಂದು ದಿನ ಬರಲಿದೆ ಆಗ ನೋಡ್ಕೊಳ್ಳೋಣ ಎಂಬ ನಿರ್ಲಕ್ಷ್ಯ ಬೇಡ. ಅದು ಕಳೆದ ಜನವರಿಯಲ್ಲೇ ಬಂದಾಗಿದೆ. ನೀವು ಎಚ್ಚರಗೊಂಡಿರಲಿಲ್ಲ ಅಷ್ಟೇ. ಕಾಸುಂಟು ಸೇಫ್ ಅಂದ್ಕೊಳ್ಳಬೇಡಿ. ಕೊರೊನಾಗೆ ನಿಮ್ಕಿಂತ ಬುದ್ಧಿ ಜಾಸ್ತಿ ಇದೆ ಅಂತ ಅದು ಮತ್ತೆ ಮತ್ತೆ ಸಾಬೀತು ಮಾಡಿದೆ. ನಿಮ್ಮ ಬುದ್ಧಿಗೆ ಮಂಕು ಕವಿದಿದೆ ಅಷ್ಟೇ. ರಾಜಕೀಯ ಪಕ್ಷಗಳು ಬಾಡಿಗೆ ಬಂಟರ ಮೂಲಕ ಕಟ್ಟುವ ಯಾವುದೇ ಕಥೆ ಸೋಷಿಯಲ್ ಮೀಡಿಯಾ ಒದಗಿಸಿದ ಜೀವನಾವಧಿಯಷ್ಟೇ ಬಾಳ್ವಿಕೆ ಬರುವಂತಹದು. ಸತ್ವ ಇಲ್ಲದ ಯಾವುದೇ ಕಥೆ ಉಳ್ಕೊಂಡಿಲ್ಲ. ಹಿಂತಿರುಗಿ ಒಮ್ಮೆ ನೋಡ್ಕಳ್ಳಿ.

>>ಆಕ್ಸಿಜೆನ್ನೋ, ಬೆಡ್ಡೋ ಇತ್ಯಾದಿ ಏನು ಕಡಿಮೆ ಬಿದ್ದಿದೆಯೋ ಅದನ್ನು ಈಗಾಗಲೇ ಕೊರೊನಾ ನಿಯಂತ್ರಣದಲ್ಲಿರುವ ದೇಶಗಳಲ್ಲಿ ಹೆಚ್ಚಿರುವುದಿದ್ದರೆ ಬೇಡಿ ತರಿಸಿಕೊಳ್ಳಿ, ಸಾಧ್ಯವಾದರೆ, ರೆಡ್ ಕ್ರಾಸ್, Doctors without borders ನಂತಹ ಸಂಘಟನೆಗಳನ್ನು ಒಳಗೊಳ್ಳಿ. ಆ ದಿನ ಬಂದಾಗಿದೆ. ಉಳಿಸಿಕೊಳ್ಳುವಷ್ಟು ಜೀವ ಉಳಿಸಿಕೊಳ್ಳೋದಕ್ಕೆ ಪ್ರಯತ್ನಿಸಿ. ಇನ್ನೂ ಇದಕ್ಕೆಲ್ಲ ಮನಸ್ಸು ಮಾಡದಿದ್ದರೆ, ನಿಮ್ಮ ಉದ್ದೇಶಗಳ ಬಗ್ಗೆಯೇ ಸಂಶಯ ಹುಟ್ಟಲಿದೆ.

>> ಆರ್ಥಿಕವಾಗಿ ಜನ ಬಸವಳಿದಿದ್ದಾರೆ. ಹಸಿವಿಗೆ ಹೆದರಿದ್ದಾರೆ. ಒಮ್ಮೆ ಕಳ್ಳತನ-ಸುಲಿಗೆ ಪ್ರಕರಣಗಳಲ್ಲಿನ ಹೆಚ್ಚಳ; ಆತ್ಮಹತ್ಯೆಗಳಲ್ಲಿ ಹೆಚ್ಚಳದ ಸುದ್ದಿಗಳನ್ನು ಈ ಗಡಿಬಿಡಿಗಳ ನಡುವೆ ಓದಿಕೊಳ್ಳಿ. ಈ ಆಕ್ರೋಶ ವಿಸ್ಫೋಟದ ಹಂತಕ್ಕೆ ಹೋಗುವಷ್ಟು ಕಾಯಬೇಡಿ.

>> ನರಳುತ್ತಿರುವ ಜನಸಾಮಾನ್ಯರನ್ನು ಅಧಿಕಾರಿಗಳು, ವೈದ್ಯಕೀಯ ವ್ಯವಸ್ಥೆಯ ರಣಹದ್ದುಗಳು ಸುಲಿಯುತ್ತಿವೆ. ಜನ ಅಸಹಾಯಕತೆಯ ಕಾರಣಕ್ಕೆ ಈಗ ಸುಲಿಸಿಕೊಳ್ಳುತ್ತಿದ್ದಾರೆ. ಆದರೆ ಇದು ಹೀಗೇ ಮುಂದುವರಿದರೆ ನಾಳೆ ಅಸಲು-ಬಡ್ಡಿ ಸಮೇತ ನಿಮಗೆ ವಾಪಸ್ ಸಿಗಬಹುದು. ಅದಕ್ಕಾಗಿಯಾದರೂ ಭಯಪಡಿ. ಅಂತಹವರನ್ನು ಹತೋಟಿಯಲ್ಲಿಡಲು ಸಾಧ್ಯ ಆಗದಿದ್ದರೆ ಆ ಸುಲಿಗೆಗಳ ಹಿಂದೆ ಇರುವವರು ನೀವೇ ಎಂದು ಅರಿಯದಷ್ಟು ದಡ್ಡರೇನಲ್ಲ ಜನ.

>> ವೈದ್ಯರು, ವೈದ್ಯಕೀಯ ವ್ಯವಸ್ಥೆ ಒಂದು ವರ್ಷ ಮೀರಿ ಪ್ರಾಣ ಉಳಿಸಲು ಒದ್ದಾಡುತ್ತಿದೆ. ತಿಂಗಳುಗಟ್ತಲೆ ಸುಸೂತ್ರ ನಿದ್ದೆ ಮಾಡದ ವೈದ್ಯಕೀಯ ಶ್ರದ್ಧೆಯನ್ನೂ ನಾನು ಕಂಡಿದ್ದೇನೆ. ಅದನ್ನು ಗೌರವಿಸಿ.

>>ಕೊನೆಯದಾಗಿ, ಭಾಷಣಗಳ ಕಾಲ ಮುಗಿದಿದೆ. ನೀವು ಊಹಿಸಿಕೊಂಡಂತಾಗಿದ್ದರೆ, ಭಾಷಣ ಸ್ಪರ್ಧೆ ನಡೆಸಿ ಗೆದ್ದವರನ್ನೇ ಇಂದ್ರ-ಚಂದ್ರ ಮಾಡಬಹುದಿತ್ತು. ಬೇಕಿದ್ದದ್ದು ಕೆಲಸ ಮಾಡುವ ಜನ ಎಂಬುದನ್ನು ಕೊರೊನಾ ಜಗನ್ಮಾರಿ ತೋರಿಸಿಕೊಟ್ಟಿದೆ. ಕೆಲಸ ಮಾಡುವುದು ಎಂದರೆ ಕೆಲಸ ಮಾಡಿದಂತೆ ಬಂಟರ ಮೂಲಕ ಪ್ರದರ್ಶನ ಅಲ್ಲ; ಫಲಿತಾಂಶದಲ್ಲಿ ಕೆಲಸ ಮಾತಾಡಬೇಕು. ಅದನ್ನು ಮಾಡಿ; ಸಾಧ್ಯ ಆಗದಿದ್ದರೆ ತೊಲಗಿ.
ಬರುತ್ತಿರುವ ಸಿಟ್ಟು, ಆಕ್ರೋಶಗಳನ್ನು ಬಹಳ ಸಂಭಾಳಿಸಿಕೊಂಡು ಅನುನಯದಿಂದ ಈ ಮಾತುಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ಇದು ನನ್ನೊಬ್ಬನ ಮಾತಲ್ಲ; ಈ ದೇಶದ ಬಹುಸಂಖ್ಯಾತ "ಮನುಷ್ಯರ" ಮಾತು ಅಂದುಕೊಂಡಿದ್ದೇನೆ.
ಜೈಹಿಂದ್!

Social Distancing: Stay Home, Stay Safe & Protect Others
👆SWARUPA SANDARSHAN
      ಸ್ವರೂಪ ಸಂದರ್ಶನ
#COVIDIOTS #govidiots