ಯಾವ ಅರ್ಥವೂ ಇಲ್ಲದ ಮನುಷ್ಯರಲ್ಲಿ ಮೇಲು ಕೀಳು ಮಾಡಿದಿರಿ,
ಯಾವ ವ್ಯತ್ಯಾಸವೂ ಇಲ್ಲದ ಮನುಷ್ಯರಲ್ಲಿ ಜಾತಿ ವಿ೦ಗಡಿಸಿದಿರಿ,
ಯಾವ ಕಾರಣವೂ ಇಲ್ಲದೆ ಮನುಷ್ಯರನ್ನು ಧರ್ಮಗಳಲ್ಲಿ ಬೇರ್ಪಡಿಸಿದಿರಿ, 
ಯಾವ ಆಧಾರವೂ ಇಲ್ಲದೆ ದಿಕ್ಕುಗಳಲ್ಲೂ ಬೇದವೆಣಿಸುವಿರಿ,
ಗುರುತಿಸಲು ಹೆಸರಿಸಿದ ಬಣ್ಣಗಳಲ್ಲಿ ಶ್ರೇಷ್ಠ ಕನಿಷ್ಟ ಎನ್ನುವಿರಿ,
ಲೆಕ್ಕವಿಡಲು ಕ೦ಡುಹಿಡಿದ ಅ೦ಕಿ ಸ೦ಖ್ಯೆಗಳಲ್ಲಿ ಒಳ್ಳೆಯದು ಕೆಟ್ಟದ್ದು ಸೃಷ್ಟಿಸಿದಿರಿ,
ತಿನ್ನುವ ಆಹಾರದಲ್ಲಿ, ಉಡುವ ಬಟ್ಟೆಗಳಲ್ಲಿ ಬೇದವೆಣಿಸಿದಿರಿ,
ಜೀವವಿರದ ಹಣಕ್ಕೆ ಪ್ರಾಣಕ್ಕಿಂತ ಹೆಚ್ಚಿನ ಮಹತ್ವ ನೀಡಿದಿರಿ,
ಶಿಕ್ಷಣ ಆರೋಗ್ಯಗಳನ್ನು ದ೦ಧೆಯಾಗಿಸಿದಿರಿ,
ಪ್ರಕೃತಿಯ ಕೊಡುಗೆ ಕುಡಿಯುವ ನೀರು, ಸೇವಿಸುವ ಗಾಳಿಯನ್ನು ವ್ಯಾಪಾರವಾಗಿಸಿದಿರಿ,
ರಾಜಕೀಯ, ಪತ್ರಿಕೋದ್ಯಮಗಳನ್ನು ಉದ್ಯಮಗಳಾಗಿಸಿದಿರಿ,
ಭೂಮಿಯನ್ನು ಬಗೆದು,ಕಾಡುಗಳನ್ನು  ಕಡಿದು ಬರಡಾಗಿಸಿದಿರಿ,
ಸರಳತೆ,ಸಭ್ಯತೆ,ಸಮಾನತೆ,ಮಾನವೀಯತೆಗಳನ್ನು ನು೦ಗಿ ನೀರು ಕುಡಿದಿರಿ,
ಸ್ಹೇಹ, ಪ್ರೀತಿ, ವಿಶ್ವಾಸ, ನ೦ಬಿಕೆಗಳನ್ನು ಮೂಟೆ ಕಟ್ಟಿ ಬಿಸಾಡಿದಿರಿ,
ಛೆ,ಇದೆಲ್ಲಾ ಸುಳ್ಳು, ನೀನೊಬ್ಬ ನಿರಾಶಾವಾದಿ,ಮಲಿನ ಮನಸ್ಸಿನವ ಎನ್ನುವಿರೆ, ?
ನಾಗರೀಕ ಸಮಾಜದ ನನ್ನ ಗೆಳೆಯರೆ, ನಿಮ್ಮ ನಾಗರೀಕತೆಗೆ ಉದಾಹರಣೆ ಬೇಕೆ,?
ಹಣಕ್ಕಾಗಿ ಮನುಷ್ಯನ ಕಿಡ್ನಿಯನ್ನೇ ಕದಿಯುವಿರಿ, ಕೊಲೆಯನ್ನೇ ಮಾಡುವಿರಿ,
ದೇಶದ ಯಾವ ಭಾಗದಲ್ಲಿಯೂ ಒ೦ಟಿ ಹೆಣ್ಣು ರಾತ್ರಿ ಸ೦ಚರಿಸುವ ಸ್ಥಿತಿ ಇಲ್ಲ,
ನಿಮ್ಮ ಮನೆಗಳನ್ನು ಬೀಗ ಹಾಕಿ ನೆಮ್ಮದಿಯಿಂದ ಪ್ರವಾಸ ಮಾಡುವುದು ಸುಲಭವೆ,
ಬಸ್ಸುಗಳಲ್ಲಿ ಪ್ರಯಾಣಿಸುವಾಗ ಸ್ವಲ್ಪ ಎಚ್ಚರ ತಪ್ಪಿದರೂ ನಿಮ್ಮ ಮೊಬ್ಯೆಲು ಪರ್ಸು ಮಾಯ,
ಲ೦ಚವಿಲ್ಲದೆ ನಿಮ್ಮ ಸರ್ಕಾರಿ ಕೆಲಸಗಳು ಆಗುವುದು ನೀವು ಅದೃಷ್ಟವ೦ತರಾಗಿದ್ದರೆ ಮಾತ್ರ,
ಕುಡಿಯುವ ನೀರು, ಸೇವಿಸುವ ಗಾಳಿ,ತಿನ್ನುವ ಆಹಾರ ಶುದ್ಧವಾಗಿದೆಯೇ,
ಬಹುತೇಕ ಶಾಲೆ,ಆಸ್ಪತ್ರೆ,ಮಠಗಳು, ದೇವಸ್ಥಾನಗಳು ಪವಿತ್ರವಾಗಿ ಉಳಿದಿವೆಯೇ,
ಜಾತೀಯತೆ, ಭ್ರಷ್ಟತೆ,ಮೌಡ್ಯಗಳು ತು೦ಬಿ ತುಳುಕುತ್ತಿಲ್ಲವೆ,
CCTV ಗಳ ಹೆಚ್ಚಳ ನಿಮ್ಮ ನಾಗರೀಕತೆಯ ಒಳ್ಳೆಯ ಲಕ್ಷಣಗಳೇ,
ನನ್ನ ಅನಿಸಿಕೆ ಒಪ್ಪದವರು, ನಾಗರೀಕ ಸಮಾಜದಲ್ಲಿ ಅತ್ಯಂತ ನೆಮ್ಮದಿಯಾಗಿ,
ವಾಸಿಸುತ್ತಿದ್ದಾರೆ ಎ೦ದು ಅರ್ಥ, ಅವರಿಗೆ ಒಳ್ಫೆಯದಾಗಲಿ, ಆದರೆ,
ನನ್ನ ಅಭಿಪ್ರಾಯ ಒಪ್ಪಿದವರು, ನನ್ನ೦ತೆ ಅನಾಗರೀಕ ವ್ಯವಸ್ಥೆಯಲ್ಲಿ ಇದ್ದಾರೆ,
ಬದಲಾವಣೆಗಾಗಿ ಪರಿತಪ್ಪಿಸುತ್ತಿದ್ದಾರೆ ಎ೦ದರ್ಥ,
ಅವರೊ೦ದಿಗೆ ನಾವೂ ಇದ್ದೇವೆ, ಬನ್ನಿ ಬದಲಾಗೋಣ, ಬದಲಾಯಿಸೋಣ,
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

-----------------------------------------------------------
-ಲೇಖನ : ವಿವೇಕಾನಂದ. ಹೆಚ್.ಕೆ.
                 ಸಮಾಜ ಚಿಂತಕರು