ಕರೋನಾ - ಮಾಸ್ಕ್ - ವ್ಯಾಪಾರ

ಕೊರೋನಾ ಕಳೆದ ವರ್ಷ ಪ್ರಪಂಚಕ್ಕೆ ವಕ್ಕರಿಸಿಕೊಂಡ ಮಹಾರೋಗ. ಈ ರೋಗವನ್ನು ತಡೆಗಟ್ಟಲು ವಿಜ್ಞಾನಿಗಳು - ವೈರಾಲಜಿಷ್ಟ್ ಗಳು ಅನೇಕ ಪ್ರಯತ್ನಗಳನ್ನು ಮಾಡಿದ್ದಾರೆ ಮತ್ತು‌ ಮಾಡುತ್ತಿದ್ದಾರೆ. ಅದಲ್ಲದೇ ಅನೇಕ ನಿಬಂಧನೆಗಳನ್ನು ಹೇಳಿ, ಅವುಗಳನ್ನು ಅನುಸರಿಸಿದರೆ ರೋಗ ನಿಯಂತ್ರಣ ಮಾಡುವುದರ ಜೊತೆಗೆ ರೋಗ ಬರದಂತೆ ತಡೆಯಬಹುದು ಎಂದು ಘೋಷಿಸಿದ್ದಾರೆ. ಅದನ್ನು WHO ಮತ್ತು ಭಾರತ ಸರ್ಕಾರವು ಕೂಡ ಒಪ್ಪಿ ಜನರಿಗೆ ಅನುಸರಿಸುವಂತೆ ಸೂಚಿಸುತ್ತಿವೆ. 

ಅದರಲ್ಲಿ ಮುಖ್ಯವಾದ ಒಂದು ವಿಷಯ ಮಾಸ್ಕ್ ಧರಿಸುವುದು. ಭಾರತದಲ್ಲಿ, ಕರ್ನಾಟಕದಲ್ಲಿ ಮಾಸ್ಕ್ ಧರಿಸಿದೆ ಬಂದರೆ ಪೋಲೀಸರು ದಂಡ ಕೂಡ ಹಾಕಿದ ಪ್ರಕರಣಗಳನ್ನು ನಾವು ಟೀವಿಗಳಲ್ಲಿ, ಪತ್ರಿಕೆಗಳಲ್ಲಿ ನೋಡಿದ್ದೇವೆ. ಆದಾದ ನಂತರ ನಮ್ಮ ದೇಶದಲ್ಲಿ ಹಲವು ವಿಧದ ಮಾಸ್ಕ್ ಗಳು ಜಾರಿಯಲ್ಲಿ ಬಂದವು. ವಿಧ ವಿಧದ ಬಟ್ಟೆಯ, ವಿಧವಿಧವಾದ ಆಕೃತಿಯ ಮಾಸ್ಕಗಳು, ಚಿತ್ರ ವಿಚಿತ್ರ ಹೆಸರಿನ ಬ್ರಾಂಡ್ ಗಳು ಮಾರುಕಟ್ಟೆಗೆ ಬಂದವು. ಹುಡುಗಿಯರಂತೂ ತಮ್ಮ ಮ್ಯಾಚಿಂಗ್ ಖಯಾಲಿಗೆ ತಕ್ಕಂತೆ ಅನೇಕ ಕಲರ್ ಗಳಲ್ಲಿ ಮಾಸ್ಕ್ ಗಳನ್ನು ಖರೀದಿಸಿ ಧರಿಸಿ ಸಂತಸ ಪಟ್ಟರು. ಕೆಲವರು ತಮ್ಮ ಟವಲ್, ವೇಲ್ ಗಳಲ್ಲೇ ಮುಖ ಮುಚ್ಚಿಕೊಂಡರು. ಕೆಲವರು ವಿವಿಧ ರೀತಿಯ ಕರ್ಚೀಪ್ ( ಕರವಸ್ರ್ತ) ಮುಖಕ್ಕೆ ಸುತ್ತಿ ಕೊಂಡು ಸುತ್ತಿದರು. ಸಂನ್ಯಾಸಿಗಳಂತೂ ಖಾವಿಯಲ್ಲಿಯೇ ಮಾಸ್ಕ್ ಮಾಡಿಸಿ ಧರಿಸಿಕೊಂಡು ತಮ್ಮ ಸಂನ್ಯಾಸತ್ವಕ್ಕೆ ಭಂಗ ಬರದಂತೆ ನೋಡಿಕೊಂಡರು ! ಅಲ್ಲಿಗೆ ರಸ್ತೆ ರಸ್ತೆಗಳಲ್ಲಿ ವಿವಿಧವಾದ ಮಾಸ್ಕ್ ಗಳ ಮಾರಾಟ ಆರಂಭವಾಗಿ, ಒಳವಸ್ತ್ರಗಳ ಮಾರಾಟಕ್ಕಿಂತ ಇದು ಅತ್ಯಧಿಕ ಆದಾಯ ಕೊಡುವ ಮಾರಾಟದ ಸರಕಾಯಿತು. ಮಾಸ್ಕ್ ಸ್ವಯಂ ಉದ್ಯೋಗದ ಒಂದು ಉದ್ಯಮವಾಗಿ ಬೆಳೆಯಲಾರಂಭಿಸಿತು.

ಆದಾದ ನಂತರ ಮಾಸ್ಕ್ ಉತ್ಪಾದಿಸುತ್ತಿದ್ದ ಕಂಪೆನಿಗಳು ಬಹಳಷ್ಟು ಮಂಕಾಗಿಬಿಟ್ಟವು. ಏಕೆಂದರೆ ರಸ್ತೆ ಬದಿಯ ಮಾಸ್ಕ್ ಗಳು ಬಹಳ ಬೇಗ ಜನಪ್ರಿಯವಾಗಿದ್ದವು. ಆದರೆ ನಿಜವಾಗಿಯೂ ಇದರಿಂದ ಮಾಸ್ಕ್ ಉತ್ಪಾದನಾ ಕಂಪೆನಿಗಳಿಗೆ ಆದಾಯದ ಆಶಾಕಿರಣವನ್ನು ತಪ್ಪಿಸಿದವು. ಪಿಪಿಇ ಕಿಟ್, ಸರ್ಜಿಕಲ್ ಮಾಸ್ಕ್, ಕೋವಿಡ್ ಹೆಣದ ಪ್ಲಾಸ್ಟಿಕ್ ರ್ಯಾಪರ್ ಕವರ್, ಇತ್ಯಾದಿ ಕಂಪೆನಿಗಳು ಆದಾಯ ಇಂದಿಗೂ ನಿಲ್ಲದಂತೆ ಮುಂದುವರೆದಿದೆ. ಈ ಮಧ್ಯೆ ಮಾಸ್ಕ್ ಗೆ ವ್ಯಾಪಾರದ ಸ್ಪರ್ಧೆ ಜಾಸ್ತಿಯಾಗಿತ್ತು. 

ಈಗ ವರದಿಗಳ ಪ್ರಕಾರ ಈ ಬಣ್ಣ ಬಣ್ಣದ ಯಾವ ಮಾಸ್ಕ್ ಗಳೂ ಸಹ ಈ ರೋಗ ನಿಯಂತ್ರಣಕ್ಕೆ ಪ್ರಯೋಜನವಿಲ್ಲ. !! ಇಂತಹ ಮಾಸ್ಕ್ ಧರಿಸಿದವರೂ ಸಹ ಈಗ ಸೋಂಕಿಗೆ ತುತ್ತಾಗಿದ್ದಾರೆ. !!. ಕಾರಣ ಏನೆಂದರೆ ಅನೇಕ ವರದಿಗಳ ಪ್ರಕಾರ ( ಇಷ್ಟ ಆದ್ರೆ ನೂರಾರು ಕೆಲಸಕ್ಕೆ ಬರುವ, ಬಾರದಿರುವ ಜರ್ನಲ್ ಗಳನ್ನು ಓದಬಹುದು) ಬಟ್ಡೆಗಳಿಂದ ಮಾಡಿದ ಮಾಸ್ಕ್ ಕೇವಲ ಬಾಯಿಂದ ಬರುವ ಹನಿಗಳು ( ಎಂಜಲು, ಕಫ) ಮೂಗಿನಿಂದ ಬರುವ ಹನಿಗಳು ( ಗೊಣ್ಣೆ, ಕಫ, ಸೀನು) ಇವುಗಳು ಬರದಂತೆ, ತಾಕದಂತೆ ತಡೆಯಬಹುದೇ ವಿನಹ ಕೋವಿಡ್ ವೈರಸ್ ಬರದಂತೆ ತಡೆಯುವುದಿಲ್ಲ. ಇದೇ ರೀತಿ ಟವಲ್, ಮಪ್ಲರ್, ಬ್ಯಾಂಡ್, ಇವೆಲ್ಲ ೩೦ ಪ್ರತಿಶತ ಅನುಕೂಲ ಆಗಬಹುದೇ ಹೊರತು ಕೋವಿಡ್ ಸೋಂಕು ತಡೆಯುವಲ್ಲಿ ಪರಿಣಾಮಕಾರಿಯಲ್ಲ. 
ಇನ್ನು ಸರ್ಜಿಕಲ್ ಮಾಸ್ಕ್ ಎಂಬುದು ನಿಜವಾಗಿಯೂ ಪರಿಣಾಮಕಾರಿ ಆದರೆ ಕೇವಲ ಒಂದು ಬಾರಿ ಬಳಸಿ ಬಿಸಾಡಿದರೆ ಮಾತ್ರ. ಇದು ವರದಿಗಳ ಪ್ರಕಾರ ೬೦ ರಿಂದ ೮೦ ಪ್ರತಿಶತ ಕೋವಿಡ್ ಸೋಂಕು ನಮಗೆ ತಗುಲದಂತೆ, ತಗುಲಿದವನಿಂದಲೂ ಬೇರೆಯವರಿಗೆ ಹರಡದಂತೆ ತಡೆ ಹಿಡಿಯುತ್ತದೆ. ಇದರ‌ ಬೆಲೆ ಕೇವಲ ೧೦ ರೂ. ಆದರೆ ದಿನವೂ ಒಂದು ಹೊಸದು ಬಳಸಿದರೆ ಅಂದಾಜು ಮಾಡಿ ಕೊಳ್ಳಿ. 

ಮತ್ತೊಂದು ಬಹಳ ಪರಿಣಾಮಕಾರಿಯಾದ ಮಾಸ್ಕ್ ಎಂದರೆ ಅದು N95 ಮತ್ತು KN 95 ಎಂದು ವೈದ್ಯರ ಸಲಹೆಗಳಿವೆ. ಇದು ಕೋವಿಡ್ ಅಥವಾ ಯಾವುದೇ ವೈರಸ್ ಒಳಪ್ರವೇಶವನ್ನು ೯೫ ಪ್ರತಿಶತ ತಡೆಯುತ್ತದೆ. ಇದರಲ್ಲಿ ಒಂದು ಫಿಲ್ಟರ್ ಮತ್ತು ಹಲವು ಪದರಗಳು ಒಳಗೊಂಡಿರುವ ವಿವಿಧ ರೀತಿಯ ಮಾದರಿಗಳು ಸಿಗುತ್ತವೆ. ಉಸಿರಾಟಕ್ಕೆ ಒಂದು ವಾಲ್ವ್ ಕೂಡ ಇರುವ ಮಾದರಿಗಳು ಸಿಗುತ್ತವೆ. ಮಾರಾಟದ ಬೆಲೆ ೨೦೦ ರಿಂದ ೫೦೦ ರೂ. ಇವುಗಳಲ್ಲಿ ಕೆಲವು ಒಗೆದು ಬಳಸಬಹುದಾದ ಮಾದರಿಗಳೂ ಸಹ ಇವೆ. 

ಈಗ ಕೆಲವು ವೀಡಿಯೋಗಳು ಎಲ್ಲೆಡೆ ದೊರಕುತ್ತಿದ್ದು ಬಟ್ಟೆಯ ಮಾಸ್ಕ್ ನಲ್ಲಿ ಊದಿ ದೀಪ ಆರಿಸ ಬಹುದು. ಸರ್ಜಿಕಲ್ ಮಾಸ್ಕ್ ನಲ್ಲಿ ಊದಿದರೆ ದೀಪದ ಜ್ವಾಲೆ ಅಲುಗಾಡುತ್ತದೆ. ಮತ್ತು ಎನ್ ೯೫ ಮಾಸ್ಕ್ ನಲ್ಲಿ ದೀಪಕ್ಕೆ ಏನೂ ಆಗುವುದಿಲ್ಲ ಎಂಬುದನ್ನು ತಾವು ಇವುಗಳ ಬಗ್ಗೆ ತಿಳಿದುಕೊಳ್ಳಬಹುದು. ನಾನೂ ಈ ಪ್ರಯೋಗ ಮಾಡಿದೆ ಇದು ನಿಜ. 

ಹೀಗಿದ್ದ ಮೇಲೆ ಸರ್ಕಾರ, ಜನಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು, ಎಲ್ಲರೂ ಮಾಸ್ಕ್ ಹಂಚಿದರಲ್ಲ. ಆಗ ಇದೆ ಅಗ್ಗವಾಗಿ ಸಿಕ್ಕ ಮಾಸ್ಕ್ ಹಂಚಿ ಫೋಟೋ ಶೂಟ್ ಮಾಡಿದವರು ಇದನ್ನು ಯೋಚಿಸಲೇ ಇಲ್ಲವಲ್ಲ!!. ಯಾವ ತಜ್ಞರೂ ಸಹ ಇದನ್ನು ಜನರಿಗೆ ತಲುಪಿಸಲಿಲ್ಲ. ಮಾಧ್ಯಮಗಳು ಅನೇಕ ವಿಷಯಗಳ ಬಗ್ಗೆ ಬೊಬ್ಬಿರಿಯುತ್ತವೆ. ಆದರೆ ಇದರ ಬಗ್ಗೆಯೂ ಸಹ ವಿವರವಾಗಿ ಹೇಳಬಹುದಿತ್ತು. ಈ ಮಾಸ್ಕ್ ಕೂಡ ರಿಸ್ಕ್ ತಡೆಯುವ ಒಂದು ಅಸ್ತ್ರವಾಗುತ್ತಿತ್ತು. 

ಇಷ್ಟೆಲ್ಲಾ ಆದರೂ ಈಗಲೂ ಟವೆಲ್, ವೇಲ್, ಮಪ್ಲರ್, ಅಂಗವಸ್ತ್ರ, ಕರವಸ್ತ್ರ ಧರಿಸುವವರಿಗೆ ನಾನು ಎಚ್ಚರಿಕೆಯಿಂದ ಯೋಚಿಸಿ ಎಂದು ಹೇಳಲು ಬಯಸುತ್ತೇನೆ. 

ಕೇವಲ ಸದಾ ಮಾರಾಟವೇ ನಮ್ಮ ಗುರಿಯಾಗಬಾರದು. ಜನರ ಆರೋಗ್ಯ, ಸಮುದಾಯದ ಆರೋಗ್ಯ ಮುಖ್ಯ.‌ ಏಕೆಂದರೆ ನಾನೂ ಸಮುದಾಯದಲ್ಲಿ ಒಬ್ಬ. 

ಸ್ವಯಂ ಫೋಟೋ ಪ್ರಚಾರ ಬೇಕಾದವರು ತಜ್ಞರ ಸಲಹೆ ಪಡೆದು ಮಾಸ್ಕ್ ಹಂಚಿ. ಕಾಲ ಮಿಂಚಿಲ್ಲ. 

ಹಾಂ ಮರೆತಿದ್ದೆ !! ಮೂರು ಲೇಯರ್ ಇರುವ ಬಟ್ಟೆಗಳ ಮಾಸ್ಕ್ ಒಳ್ಳೆಯದೆ. ಆದರೆ ಉಸಿರಾಟದ ಸಮಸ್ಯೆಗೆ ಅದು ಮುಂದೆ ಕಾರಣವಾಗಬಹುದು ! 

ಲೇಖನ #ಶಲ್ವಸ್ವಾಸ್ಥ್ಯ  ಡಾ. ಶಲ್ವಪ್ಪಿಳ್ಳೈ ಅಯ್ಯಂಗಾರ್