ಮೇಷ್ಟ್ರುಗಳು ಮತ್ತು ಎಳೆಯ- ದೇಹದಾರ್ಢ್ಯ ಇರುವ ಜೀವಗಳು ಹಾಗೂ ಬಮಿ

- - - - - - - - - - 
ಈ ಬಾರಿ ಕೊವಿಡ್ ಸೋಂಕಿಗೆ ಹಲವು ಮಂದಿ ಎಳೆಯ ಅಥವಾ ನಡುವಯಸ್ಸಿನವರು (30-45ಪ್ರಾಯವರ್ಗ) ಬಲಿಯಾಗುತ್ತಿರುವ ಸುದ್ದಿಗಳು ಬಹಳ ಜನರಲ್ಲಿ ಆತಂಕ ಹುಟ್ಟಿಸಿದೆ. ಅಷ್ಟೊಂದು ಗಟ್ಟಿಮುಟ್ಟಾಗಿದ್ದರು. ಸಾಯುವ ವಯಸ್ಸೂ ಅಲ್ಲ, ಜಿಮ್‌ಗೆ ಹೋಗುತ್ತಿದ್ದ ಜೀವ ಎಂಬೆಲ್ಲ ಮಾತುಗಳನ್ನು ಕೇಳುತ್ತಿದ್ದೇವೆ. ಜೊತೆಗೆ ಸಾಹಿತ್ಯ-ಸಾಮಾಜಿಕ ಕಳಕಳಿಗಳೊಂದಿಗೆ ಚಟುವಟಿಕೆಯಿಂದಿರುವ ಮೇಷ್ಟ್ರುಗಳು ಬಹಳ ಮಂದಿ ಕೊವಿಡ್‌ಗೆ ಬಲಿ ಆಗುತ್ತಿರುವ ಸುದ್ದಿ ದಿನಬೆಳಗಾದರೆ ಕೇಳುತ್ತಿದ್ದೇವೆ.
ಇತ್ತೀಚೆಗಿನ ಲಾನ್ಸೆಟ್ ಸಮೀಕ್ಷೆಯೊಂದು ದೇಹದ ದ್ರವ್ಯರಾಶಿ ಸೂಚ್ಯಂಕಕ್ಕೂ (BMI- Body Mass Index) ಮತ್ತು ಕೊವಿಡ್ ಪ್ರಕರಣಗಳು ತೀವ್ರಸ್ವರೂಪದಲ್ಲಿ ಕಾಣಿಸಿಕೊಳ್ಳುವುದಕ್ಕೂ ಸಂಬಂಧಗಳನ್ನು ಗುರುತಿಸಿದೆ.

ಕೊರೊನಾ ಅತಿಯಾಗಿ ಬಾಧಿಸುವುದು AC2 ಕಿಣ್ವಗಳನ್ನು ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವವರನ್ನು ಮತ್ತು ದೇಹದ್ರವ್ಯರಾಶಿ ಸೂಚ್ಯಂಕ ಹೆಚ್ಚಿರುವುದು (ಅರ್ಥಾತ್ ಬೊಜ್ಜು ದೇಹ) AC2 ಕಿಣ್ವಗಳ ಪ್ರಮಾಣ ಹೆಚ್ಚಿರುವುದಕ್ಕೆ ಹಾಗೂ ಆಮೂಲಕ ಕೊವಿಡ್‍‌ಗೆ ಪೂರಕವಾಗಿ ವರ್ತಿಸಬಲ್ಲ ದೇಹಸ್ಥಿತಿ ಎಂಬುದು ಕೂಡ ಈಗಾಗಲೇ ವೈಜ್ಞಾನಿಕವಾಗಿ ಸಾಬೀತಾಗಿದೆ. ಈ ಲಾನ್ಸೆಟ್ ಅಧ್ಯಯನದಲ್ಲಿ ಬಿಎಂಐ 23 kg/m2 ಗಿಂತ ಹೆಚ್ಚಿರುವವರಲ್ಲಿ ಕೊರೊನಾ ತೊಂದರೆ ಹೆಚ್ಚಿನ ಪ್ರಮಾಣದಲ್ಲಿರುವುದನ್ನು ಗುರುತಿಸಲಾಗಿದೆ. (ವಿವರಗಳಿಗೆ https://www.thelancet.com/journals/landia/article/PIIS2213-8587(21)00089-9/fulltext) 

ಫಿಟ್ ಆಗುವುದು ಮಾತ್ರವಲ್ಲದೇ ಜಿಮ್‌ನಲ್ಲಿ ಸ್ನಾಯುಗಳನ್ನು ಬೆಳೆಸಿಕೊಳ್ಳುವುದು ಫ್ಯಾಷನ್ ಆಗಿರುವ ದಿನಗಳಿವು. ಎಷ್ಟು ಪ್ಯಾಕ್ ಎಂಬುದು ಫಿಟ್‌ನೆಸ್‌ನಲ್ಲಿ ಆಸಕ್ತಿಯ ವಿಷಯ. ಇದಕ್ಕಾಗಿ ಅಸಹಜವಾದ ಆಹಾರ ಪದ್ಧತಿ, ಅದನ್ನು ಕರಗಿಸುವ ವ್ಯಾಯಾಮ ಇತ್ಯಾದಿಗಳ ಕಾರಣದಿಂದಾಗಿ ದೇಹ ದ್ರವ್ಯರಾಶಿ ಅಸಹಜವಾಗಿ ಹೆಚ್ಚಿರುವುದು ಕೂಡ ಈಗೀಗ ಸಾಮಾನ್ಯ.

ಹಾಗೆಯೇ, ಸಾಹಿತ್ಯ- ಓದು, ಸಾಂಸ್ಕೃತಿಕ ಚಟುವಟಿಕೆಗಳ ಹೆಸರಲ್ಲಿ ದೈಹಿಕ ವ್ಯಾಯಾಮ- ಸಂತುಲಿತ ಆಹಾರ ಪದ್ಧತಿ ಇಲ್ಲದ ಅಸ್ತವ್ಯಸ್ಥ ಬದುಕನ್ನೇ ನೆಚ್ಚಿಕೊಂಡಿರುವ ಮೇಸ್ಟ್ರುಗಳು ಕೂಡ ಬಹಳ ಸಾಮಾನ್ಯ.

ಬೊಜ್ಜು, ಪ್ರಾಯ, ಮಧುಮೇಹ, ರಕ್ತದೊತ್ತಡ, ಶ್ವಾಸಕೋಶದ ದೀರ್ಘಕಾಲಿಕ ತೊಂದರೆಗಳು, ಅಲರ್ಜಿಗಳ ಜೊತೆ ಇಂತಹದೊಂದು “ಓವರ್ ಫಿಟ್‌ನೆಸ್” ಕೂಡ ಈಗ ಎಳೆಯ ವಯಸ್ಸಿನ ಯುವಕರು ಕೊರೊನಾಗೆ ಸುಲಭ ತುತ್ತಾಗುತ್ತಿರುವುದಕ್ಕೆ ಕಾರಣ ಇರಬಹುದೆ? ಹಾಗೆಯೇ ಮೇಷ್ಟ್ರುಗಳ “ಸೆಡೆಂಟರಿ ಜೀವನಶೈಲಿ” ಅವರು ಕೊವಿಡ್‌ಗೆ ಸುಲಭ ತುತ್ತಾಗುವಂತೆ ಮಾಡುತ್ತಿರಬಹುದೆ? ಕಣ್ಣೆದುರು ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ ಇದ್ದರೂ ಇರಬಹುದು ಅನ್ನಿಸುತ್ತದೆ. ಈ ಬಗ್ಗೆ ಪರಿಣತರು ಹೇಳಬೇಕು; ಸೂಕ್ತ ಅಧ್ಯಯನಗಳು ಸ್ಥಳೀಯವಾಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ನಡೆದರೆ ಒಳ್ಳೆಯದು ಅನ್ನಿಸುತ್ತದೆ.

#COVID19