ತೇರದಾಳದ ಕಲ್ಲಟ್ಟಿ ಗಲ್ಲಿಯಲ್ಲಿ ಅತೀಕ್ರಮಣ ಮಾಡಿಕೊಂಡಿರುವ ಪುರಸಭೆ ಆಸ್ತಿಯನ್ನು ಪುರಸಭೆಯವರು ವಶಕ್ಕೆ ಪಡೆದರು.
ತೇರದಾಳ : ಬಹಳಷ್ಟು ವರ್ಷಗಳ ಹಿಂದಿನಿಂದಲೂ ಅತಿಕ್ರಮಗೊಂಡಿರುವ ಕಲ್ಲಟ್ಟಿಯಲ್ಲಿನ ಪುರಸಭೆ ಆಸ್ತಿಯನ್ನು ಪುರಸಭೆ ಅಧಿಕಾರಿಗಳು ಇಂದು ಪೋಲಿಸ್ ಬಂದೂಬಸ್ತ್‍ನಲ್ಲಿ ತಮ್ಮ ವಶಕ್ಕೆ ಪಡೆದರು.
ಕಲ್ಲಟ್ಟಿಯಲ್ಲಿನ ಮೆಹಬೂಬ ಮಹ್ಮದಸಾಬ ಮೂಡಲಗಿಯವರು ಸರ್ವೆ ನಂ. 3517ರಲ್ಲಿ ಸುಮಾರು 15000 ಚ.ಅಡಿ ಖುಲ್ಲಾ ಜಾಗೆಯಲ್ಲಿ ಬಹಳಷ್ಟು ವರ್ಷಗಳಿಂದ ಕಟ್ಟಿಗೆ ಕೊರೆಯುವ ಮಿಲ್ ನಡೆಸುತ್ತಿದ್ದರು. ಆದರೆ ಕಳೆದ 15ವರ್ಷಗಳ ಹಿಂದೆ ಪುರಸಭೆಯವರು ಈ ಜಾಗೆಯನ್ನು ಖಾಲಿ ಮಾಡಿಸಲು ಹೋದಾಗ ಕಟ್ಟಿಗೆ ಕೊರೆಯವ ಮಿಲ್ಲಿನ ಮಾಲಕರು ಕೋರ್ಟಿಗೆ ಹೋಗಿದ್ದರು. ಅದು ಸುಮಾರು 15 ವರ್ಷಗಳ ನಂತರ ಹೈಕೋರ್ಟ ಈ ಜಾಗೆಯು ಪುರಸಭೆಗೆ ಸೇರಿದ್ದು ಎಂದು ಆದೇಶ ಮಾಡಿದ್ದರಿಂದ ಇಂದು ಪೋಲಿಸ್ ಬಿಗಿ ಬಂದೂಬಸ್ತ್‍ದಲ್ಲಿ ಈ ಜಾಗೆಯಲ್ಲಿನ ಎಲ್ಲ ಸಾಮಗ್ರಿಗಳನ್ನು ತೆರವುಗೊಳಿಸಿದರು.
ಜೆಸಿಬಿಯ ಸಹಾಯದಿಂದ ಅಲ್ಲಿರುವ ಕಟ್ಟಿಗೆ ಕೊರೆಯುವ ಮಸೀನ್‍ಗೆ ಹಾಕಿರುವ ಶೆಡ್‍ನ್ನು ತೆರವುಗೊಳಿಸಿದರು. ಅಲ್ಲಿನ ಕಟ್ಟಿಗೆ ಸೇರಿದಂತೆ ಇನ್ನುಳಿದ ವಸ್ತುಗಳನ್ನು ಬೇರೆ ಕಡೆಗೆ ಸಾಗಿಸಿದರು. ಇಲ್ಲಿನ ಎಲ್ಲ ಸಾಮಾನುಗಳನ್ನು ತಗೆದುಕೊಳ್ಳಲು ನಮಗೆ ಎರಡು ದಿವಸ ಅವಕಾಶ ಕೊಡಿ ಎಂದು ಮಿಲ್ಲಿನ ಮಾಲಕರು ಕೇಳಿಕೊಂಡರು. ಆದರೆ ಅದಕ್ಕೆ ಪುರಸಭೆ ಅಧಿಕಾರಿಗಳು ಒಪ್ಪದೆ ತಮ್ಮ ಕಾರ್ಯಾಚರಣೆಯನ್ನು ಮುಂದುವರೆಸಿದರು. ಮುಂಜಾನೆಯಿಂದ ಸಾಯಂಕಾಲದ ವರೆಗೆ ತೆರವು ಕಾರ್ಯಾಚರಣೆ ನಡೆಯಿತು. ಹಾಗೂ ಈ ಸ್ಥಳದ ಸುತ್ತ ಮುತ್ತಲೂ ಆಕ್ರಮಿಸಿಕೊಂಡಿರುವ ಒತ್ತುವರಿ ಜಾಗೆಯನ್ನು ಪುರಸಭೆಯವರು ಇಂದು ಖಾಲಿ ಮಾಡಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಮಾತನಾಡಿ ಈ ಜಾಗೆಯು ಪುರಸಭೆಗೆ ಸೇರಿದ್ದು, ಇದು ಸುಮಾರು 15ವರ್ಷಗಳಿಂದ ಹೈಕೋರ್ಟಿನಲ್ಲಿ ಕೇಸ್ ನಡೆದಿತ್ತು. ಅದು ಈಗ ಪುರಸಭೆಗೆ ಸೇರಿದೆ ಎಂದು ಹೈಕೋರ್ಟ ಆದೇಶ ಮಾಡಿದ್ದರಿಂದ ಇದನ್ನು ತೆರವುಗೊಳಿಸಿ ಈ ಆಸ್ತಿಯನ್ನು ಪುರಸಭೆಗೆ ವಶಕ್ಕೆ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಉಪತಹಶೀಲ್ದಾರ ಎಸ್.ಬಿ. ಮಾಯನ್ನವರ, ಪುರಸಭೆ ಕಂದಾಯ ಅಧಿಕಾರಿ ಎಫ್.ಬಿ.ಗಿಡ್ಡಿ, ಜೆಇ ಸಿದ್ದಪ್ಪ ಮಾತಾಳಿ, ಗ್ರಾಮಲೆಕ್ಕಾಧಿಕಾರಿ ಪಿ.ಎಸ್.ಮಠಪತಿ, ಸಿಪಿಐ ಜೆ. ಕರುಣೇಶಗೌಡ, ಪಿಎಸ್‍ಐ ವಿಜಯ ಕಾಂಬಳೆ, ಎಸ್.ಕೆ.ಸೂರ್ಯವಂಶಿ ಸೇರಿದಂತೆ ಪೋಲಿಸ್ ಸಿಬ್ಬಂದಿ ಮತ್ತು ಡಿಆರ್ ಪೋಲಿಸ್ ಸಿಂಬ್ಬಂದಿಯವರು ರಕ್ಷಣೆ ಒದಗಿಸಿದ್ದರು. ಹಾಗೂ ಪುರಸಭೆ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿಯವರು ಇದ್ದರು.

Social Plugin